Bengaluru | ಆಸ್ಪತ್ರೆ ಶೌಚಾಲಯದಲ್ಲಿ ಗರ್ಭಿಣಿಯ ವಿಡಿಯೋ ಚಿತ್ರೀಕರಣ ಆರೋಪ: ಹೌಸ್‍ಕೀಪಿಂಗ್ ಸಿಬ್ಬಂದಿ, ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು : ಖಾಸಗಿ ಆಸ್ಪತ್ರೆಯೊಂದರ ಶೌಚಾಲಯದಲ್ಲಿ ಗರ್ಭಿಣಿ ಮಹಿಳೆಯೊಬ್ಬರ ಫೋಟೋ/ವಿಡಿಯೋ ಚಿತ್ರೀಕರಿಸಲು ಯತ್ನಿಸಿದ ಆರೋಪದಡಿ ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಹೌಸ್‍ಕೀಪಿಂಗ್ ಸಿಬ್ಬಂದಿ ವಿರುದ್ಧ ಇಲ್ಲಿನ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಮಹಿಳೆ ನೀಡಿದ ದೂರಿನನ್ವಯ ಹೌಸ್‍ಕೀಪಿಂಗ್ ಸಿಬ್ಬಂದಿ ಕೃಷ್ಣ ರಾಮ್ ಮತ್ತು ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ವರ್ತೂರು ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯ ಸೆಕ್ಷನ್ 77, 79, 62 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66ಇ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದೂರುದಾರ ಮಹಿಳೆ ಮೇ21ರಂದು ಮಧ್ಯಾಹ್ನ ಸರ್ಜಾಪುರ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಆಸ್ಪತ್ರೆಯ ಶೌಚಾಲಯವನ್ನು ಬಳಸುತ್ತಿದ್ದಾಗ, ಅಲ್ಲಿನ ಹೌಸ್‍ಕೀಪಿಂಗ್ ಸಿಬ್ಬಂದಿ ಕೃಷ್ಣ ರಾಮ್ ಎಂಬಾತ ಸಂಶಯಾಸ್ಪದವಾಗಿ ವರ್ತಿಸುತ್ತಿರುವುದು ಅವರ ಗಮನಕ್ಕೆ ಬಂದಿತ್ತು.
ಮೊಬೈಲ್ ಫೋನ್ ಬಳಸಿ ಶೌಚಾಲಯದ ಒಳಗಿನ ದೃಶ್ಯಗಳನ್ನು ಚಿತ್ರೀಕರಣ ಮಾಡುತ್ತಿರುವುದನ್ನು ಗಮನಿಸಿದ ಮಹಿಳೆ ತಕ್ಷಣ ಆತನನ್ನು ಪ್ರಶ್ನಿಸಿದ್ದರು. ಇದರಿಂದ ಗಾಬರಿಗೊಂಡ ಆರೋಪಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ. ನೊಂದ ಮಹಿಳೆ ಕೂಡಲೇ ಆಸ್ಪತ್ರೆಯ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ.
ಇನ್ನು, ಘಟನೆ ಸಂಬಂಧ ಬೆಂಗಳೂರು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಸೈದುಲು ಅಡಾವತ್ ಮಾತನಾಡಿ, ಪ್ರಾಥಮಿಕ ತನಿಖೆಯ ವೇಳೆ ಆರೋಪಿಯ ಮೊಬೈಲ್‍ನಲ್ಲಿ ಸದ್ಯಕ್ಕೆ ಯಾವುದೇ ಆಕ್ಷೇಪಾರ್ಹ ಫೋಟೋ ಅಥವಾ ವಿಡಿಯೋಗಳು ಪತ್ತೆಯಾಗಿಲ್ಲ. ಆದರೆ, ಡೇಟಾವನ್ನು ಡಿಲೀಟ್ ಮಾಡಿರುವ ಸಾಧ್ಯತೆ ಇರುವುದರಿಂದ ಆರೋಪಿಯ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಆರೋಪಿ ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿ ತನಿಖೆ ಚುರುಕುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.






