Bengaluru | ಜ್ಯುವೆಲ್ಲರಿ ಮಳಿಗೆ ಗೋಡೆ ಕೊರೆದು ಕನ್ನ: ಮೂವರು ಸೆರೆ, 98.39 ಲಕ್ಷ ಮೌಲ್ಯದ ಮಾಲು ವಶ

ಸಾಂದರ್ಭಿಕ ಚಿತ್ರ | Photo Credit : magnific.com
ಬೆಂಗಳೂರು : ಜ್ಯುವೆಲ್ಲರಿ ಮಳಿಗೆ ಹಿಂಭಾಗದ ಗೋಡೆಯನ್ನು ಕೊರೆದು ಕಳವು ಮಾಡಿಕೊಂಡು ರಾಜಸ್ಥಾನಕ್ಕೆ ಪರಾರಿಯಾಗಿದ್ದ ಮೂವರನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿ 98.39 ಲಕ್ಷ ರೂ. ಮೌಲ್ಯದ ಬೆಳ್ಳಿ ಗಟ್ಟಿ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಯಶವಂತಪುರದ ಗೋಕುಲ ಬಡಾವಣೆ 1ನೇ ಹಂತದ ನಿವಾಸಿಯೊಬ್ಬರು ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಜ್ಯುವೆಲ್ಲರಿ ಮಳಿಗೆ ಇಟ್ಟುಕೊಂಡಿದ್ದು ಎ.27 ರಂದು ರಾತ್ರಿ ಚಿನ್ನಾಭರಣಗಳನ್ನು ಲಾಕರ್ನಲ್ಲಿಟ್ಟು ಬೆಳ್ಳಿ ವಸ್ತುಗಳನ್ನು ಶೋಕೇಸ್ನಲ್ಲಿಟ್ಟು ಮಳಿಗೆ ಬೀಗ ಹಾಕಿಕೊಂಡು ಹೋಗಿದ್ದರು.
ಅಂದು ರಾತ್ರಿ ಜ್ಯುವೆಲ್ಲರಿ ಮಳಿಗೆ ಹಿಂಭಾಗದ ಗೋಡೆ ಕೊರೆದು ಒಳಗೆ ನುಗ್ಗಿ ಕೈಗೆ ಸಿಕ್ಕಿದ 70 ಕೆ.ಜಿ. ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದಲ್ಲದೇ ಅಂಗಡಿಯ ಹಿಂಭಾಗದ ಸೆರಾಮಿಕ್ಸ್ ಅಂಗಡಿಯ ಶಟರ್ ಬೀಗ ಒಡೆದು ಲ್ಯಾಪ್ಟಾಪ್, ಮೊಬೈಲ್, ಸ್ಯಾನಿಟರಿ ವಸ್ತುಗಳು ಹಾಗೂ ಹಣ ದೋಚಿಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಮಾಲಕರು ದೂರು ನೀಡಿದ್ದರು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಬಾಗಲಗುಂಟೆ ಠಾಣೆ ಪೊಲೀಸರು ಮಾಹಿತಿಗಳನ್ನು ಕಲೆಹಾಕಿ ರಾಜಸ್ಥಾನದ ರಾಯಪುರದಲ್ಲಿ ಇಬ್ಬರನ್ನು, ಬೆಂಗಳೂರು ಗ್ರಾಮಾಂತರದ ನೆಲಮಂಗಲದಲ್ಲಿ ಮತ್ತೊಬ್ಬನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.






