Bengaluru | ಕುರಿ ಮಾಂಸದ ಖಾದ್ಯವೆಂದು ಗೋಮಾಂಸದ ಆಹಾರ ನೀಡುತ್ತಿದ್ದ ಆರೋಪ : ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಕುರಿ ಮಾಂಸದ ಖಾದ್ಯವೆಂದು ಗ್ರಾಹಕರನ್ನು ನಂಬಿಸಿ ಗೋಮಾಂಸದ ಆಹಾರ ನೀಡುತ್ತಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ಇಲ್ಲಿನ ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಕೇರಳ ಮೂಲದ ಜಿಜು(42) ಹಾಗೂ ಶೀಂಬು(43) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಒಂದು ವಾರದ ಹಿಂದೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಈ ಆರೋಪಿಗಳು ಹಿಂದಿನ ಆರು ತಿಂಗಳಿನಿಂದ ಬೆಂಗಳೂರಿನ ಬೂದಿಗೆರೆ ಸಮೀಪ ‘ಕಾಯಲೋರಮ್ ರೆಸ್ಟೋರೆಂಟ್’ ಎಂಬ ಹೋಟೆಲ್ ಅನ್ನು ನಡೆಸುತ್ತಿದ್ದರು. ಈ ಹೋಟೆಲ್ಗೆ ತೆರಳಿದ್ದ ಗ್ರಾಹಕರೊಬ್ಬರು ಕುರಿ ಮಾಂಸದ ಆಹಾರ ಸೇವಿಸುವಾಗ ಅನುಮಾನ ಬಂದಿದೆ. ಈ ಕುರಿತು ಅವರು ಆವಲಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪಶು ವೈದ್ಯರೊಂದಿಗೆ ಹೋಟೆಲ್ ಮೇಲೆ ದಾಳಿ ನಡೆಸಿದ್ದರು. ಈ ಹೋಟೆಲ್ನಲ್ಲಿದ್ದ ಮಾಂಸದ ಖಾದ್ಯವನ್ನು ಜಪ್ತಿ ಮಾಡಲಾಗಿತ್ತು. ಅದನ್ನು ಪರಿಶೀಲಿಸಿದಾಗ ಗೋಮಾಂಸದ ಖಾದ್ಯವೆಂಬುದು ಗೊತ್ತಾಗಿದೆ.
ಹೆಚ್ಚಿನ ಲಾಭದ ಆಸೆಗೆ ಆರೋಪಿಗಳು ಮಾಂಸದ ಆಹಾರದಲ್ಲಿ ಕಲಬೆರಕೆ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ. ಸದ್ಯ, ಈ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




