Bengaluru | ಅಕ್ರಮ ಸಂಬಂಧ ಶಂಕೆ : ವ್ಯಕ್ತಿಗೆ ಚಾಕು ಇರಿದು ಕೊಲೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಇಲ್ಲಿನ ಜೆ.ಜೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂ.3ರ ತಡರಾತ್ರಿ ವರದಿಯಾಗಿದೆ.
ದೇವರಾಜ ಅರಸು ನಗರದ ನಿವಾಸಿ ಅಕ್ರಂಪಾಷ(45) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ನಗರದ ಜೆ.ಸಿ. ರಸ್ತೆಯಲ್ಲಿ ಕಾರುಗಳ ಬಿಡಿ ಭಾಗಗಳನ್ನು ಮಾರಾಟ ಮಾಡುತ್ತಿದ್ದರು. ಜೂ.3ರಂದು ರಾತ್ರಿ ಕಾರ್ಯಕ್ರಮದ ನಿಮಿತ್ತ ಚಾಮರಾಜಪೇಟೆಗೆ ಹೋಗಿದ್ದ ಅಕ್ರಂಪಾಷ ಅವರು, ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ರಾತ್ರಿ 11.30ರಲ್ಲಿ ಜೆ.ಜೆ.ನಗರ ಟಿಪ್ಪು ಚೌಕದಲ್ಲಿರುವ ಸಮುದಾಯ ಭವನದ ಬಳಿ ಬರುತ್ತಿದ್ದರು. ಈ ವೇಳೆ, ಆರೋಪಿ ಖಾಲಿದ್ ಮತ್ತು ಆತನ ಸ್ನೇಹಿತರು ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಅಕ್ರಂಪಾಷಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡು ನೆಲಕ್ಕೆ ಬಿದ್ದಿದ್ದ ಅಕ್ರಂ ಪಾಷನನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಅಕ್ರಂಪಾಷ ಮಹಿಳೆಯೊಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂಬುದೇ ಈ ಕೊಲೆಗೆ ಮೂಲ ಕಾರಣ ಎಂದು ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಜೆ.ಜೆ.ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಶೋಧ ನಡೆಸಿದ್ದಾರೆ.




