Bengaluru | ಝಮೀರ್ ಅಹ್ಮದ್‌ಗೆ ಮಂತ್ರಿ ಸ್ಥಾನ ನೀಡಲು ಆಗ್ರಹಿಸಿ ಧರಣಿ

ಬೆಂಗಳೂರು : ಮಾಜಿ ಸಚಿವ, ಚಾಮರಾಜಪೇಟೆ ಕ್ಷೇತ್ರದ ಶಾಸಕ ಝಮೀರ್ ಅಹ್ಮದ್ ಖಾನ್‌ಗೆ ನೂತನ ಸರಕಾರದಲ್ಲಿ ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡಲಾಗಿದೆ. ಅವರಿಗೆ ಡಿಸಿಎಂ ಅಥವಾ ಸಚಿವ ಸ್ಥಾನವನ್ನು ನೀಡಬೇಕೆಂದು ಆಗ್ರಹಿಸಿ ಮುಸ್ಲಿಮ್ ಮತ್ತು ದಲಿತ ಸಮುದಾಯದ ಕಾರ್ಯಕರ್ತರು ಧರಣಿ ನಡೆಸಿದ್ದಾರೆ.
ಶುಕ್ರವಾರ ಫ್ರೀಡಂ ಪಾರ್ಕ್‌ನಲ್ಲಿ ಸೇರಿದ ಝಮೀರ್ ಅಹ್ಮದ್ ಬೆಂಬಲಿಗರು, ಝಮೀರ್ ಅಹ್ಮದ್ ಅವರು ರಾಜ್ಯದಲ್ಲಿನ ಎಲ್ಲ ಸಮುದಾಯಗಳನ್ನು ಒಗ್ಗಟ್ಟಿನಿಂದ ತೆಗೆದುಕೊಂಡು ಹೋಗುತ್ತಿರುವ ಅಗ್ರಗಣ್ಯ ನಾಯಕ. ಅವರು ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಶ್ರಮಿಸುತ್ತಿದ್ದಾರೆ. ಇದೀಗ ಅವರಿಗೆ ನೂತನ ಸರಕಾರದಲ್ಲಿ ಯಾವುದೇ ಸ್ಥಾನಮಾನ ನೀಡಿಲ್ಲ ಎಂದು ದೂರಿದರು.
ಕಾಂಗ್ರೆಸ್ ವರಿಷ್ಠರು ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಂದಿನ ಸಂಪುಟ ವಿಸ್ತರಣೆ ವೇಳೆ ಆದ್ಯತೆ ಮೇಲೆ ಝಮೀರ್ ಅಹ್ಮದ್‌ರಿಗೆ ಸಚಿವ ಸ್ಥಾನವನ್ನು ನೀಡಬೇಕು. ಇಲ್ಲವಾದರೆ ಕ್ಷೇತ್ರದ ಜನರೊಂದಿಗೆ ಸೇರಿ ದೊಡ್ಡ ಮಟ್ಟದ ಹೋರಾಟ ಮಾಡಲಾಗುವುದು ಎಂದು ಮುಖಂಡರು ಇದೇ ವೇಳೆ ಎಚ್ಚರಿಕೆ ನೀಡಿದರು.




