ಬೆಂಗಳೂರು | ಬೀದಿ ಬದಿ ವ್ಯಾಪಾರಿಗಳೊಂದಿಗೆ ನಿರ್ಮಲಾ ಸೀತಾರಾಮನ್ ಚರ್ಚೆ

ಬೆಂಗಳೂರು : ನರೇಂದ್ರ ಮೋದಿಯವರು ಪ್ರಧಾನಿಯಾಗಿ ಹನ್ನೆರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ ಅಭಿಯಾನದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪೊರಕೆ ಹಿಡಿದು ಕಸ ಗುಡಿಸಿದರು.
ರವಿವಾರ ಬೆಳಗ್ಗೆ ನಗರದ ಮೈಸೂರು ಬ್ಯಾಂಕ್ ವೃತ್ತದ ಆಂಜನೇಯ ದೇವಾಲಯದ ಬಳಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಈ ವೇಳೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದರು. ಅಲ್ಲದೆ, ಬೀದಿ ಬದಿಯಲ್ಲಿನ ಹಣ್ಣು-ತರಕಾರಿ ವ್ಯಾಪಾರಿಗಳೊಂದಿಗೆ ನಿರ್ಮಲಾ ಸೀತಾರಾಮನ್ ಸಮಾಲೋಚನೆ ನಡೆಸಿದರು.
ಇದಕ್ಕೂ ಮುನ್ನ ಇಲ್ಲಿನ ಹಡ್ಸನ್ ವೃತ್ತದ ಬಳಿಯ ಬನಪ್ಪ ಉದ್ಯಾನವನದಲ್ಲಿನ ದೇವರ ದಾಸಿಮಯ್ಯ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದ ನಿರ್ಮಲಾ ಸೀತಾರಾಮನ್ ಅವರು, ತಾಯಿ ಹೆಸರಿನಲ್ಲಿ ಒಂದು ಸಸಿಯನ್ನು ನೆಟ್ಟು ನೀರೆರೆದರು.
ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ನರೇಂದ್ರ ಮೋದಿ ಪ್ರಧಾನಿಯಾಗಿ 12 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸ್ವಚ್ಛ ಭಾರತ್ ಅಭಿಯಾನ ಮತ್ತು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹನ್ನೆರಡು ವರ್ಷದಲ್ಲಿ ದೇಶ ಸುಭದ್ರವಾಗಿದ್ದು, ಅಭಿವೃದ್ಧಿ ಪರವಾದ ಕೆಲಸಗಳು ನಡೆಯುತ್ತಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಪಿ.ಸಿ.ಮೋಹನ್, ಶಾಸಕ ಎಸ್. ಸುರೇಶ್ ಕುಮಾರ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಸೇರಿದಂತೆ ಪಕ್ಷದ ಮುಖಂಡರು ಭಾಗವಹಿಸಿದ್ದರು.






