Bengaluru | ವೇಶ್ಯಾವಾಟಿಕೆ ದಂಧೆ: ಆರು ಮಂದಿಯನ್ನು ಬಂಧಿಸಿದ ಸಿಸಿಬಿ

ಸಾಂದರ್ಭಿಕ ಚಿತ್ರ
ಬೆಂಗಳೂರು : ಬಾಡಿಗೆ ಮನೆ ಹಾಗೂ ಸ್ಪಾವೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಲ್ವರು ಮಹಿಳೆಯರು ಸೇರಿ ಆರು ಮಂದಿಯನ್ನು ಬೆಂಗಳೂರಿನ ಸಿಸಿಬಿ ಮಹಿಳಾ ಸಂರಕ್ಷಣಾ ದಳದಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಕಾಮಾಕ್ಷಿಪಾಳ್ಯ, ಕೆ.ಆರ್.ಪುರಂ, ಕುಮಾರಸ್ವಾಮಿ ಲೇಔಟ್, ಹೆಣ್ಣೂರು ಪೊಲೀಸ್ ಠಾಣಾ ವ್ಯಾಪಿಗಳಲ್ಲಿ ಮನೆಗಳನ್ನು ಬಾಡಿಗೆಗೆ ಪಡೆದು ಹಾಗೂ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಸ್ಪಾವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆ ಸ್ಥಳಗಳ ಮೇಲೆ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿ ದಾಳಿ ಮಾಡಿ ನಾಲ್ವರು ಮಹಿಳೆಯರು, ಇಬ್ಬರು ಪುರುಷರನ್ನು ಬಂಧಿಸಿದ್ದಾರೆ.
ಈ ಸಂದರ್ಭದಲ್ಲಿ ಹೊರ ರಾಜ್ಯದ ನಾಲ್ವರು ಮಹಿಳೆಯರು ಹಾಗೂ ಸ್ಥಳೀಯ ಮೂವರು ಸೇರಿದಂತೆ ಏಳು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಆರೋಪಿಗಳನ್ನು ವಿಚಾರಣೆ ಒಳಪಡಿಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಕಾಮಾಕ್ಷಿಪಾಳ್ಯ, ಕೆ.ಆರ್.ಪುರಂ, ಕುಮಾರಸ್ವಾಮಿ ಲೇಔಟ್, ಹೆಣ್ಣೂರು, ವರ್ತೂರು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಜರುಗಿಸಿರುವುದಾಗಿ ತಿಳಿಸಿದ್ದಾರೆ.






