Bengaluru | ಕೇರಳ ಮೂಲದ ಯುವಕರನ್ನು ಬೆದರಿಸಿ ದರೋಡೆ; ಸಿಐಡಿ ಇನ್ಸ್ಪೆಕ್ಟರ್ ವಿರುದ್ಧ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಬೆಂಗಳೂರು : ಪೊಲೀಸ್ ವಾಹನದಲ್ಲಿ ಬಂದು, ಪೊಲೀಸ್ ಗುರುತಿನ ಚೀಟಿ ತೋರಿಸಿ ಕೇರಳ ಮೂಲದ ಯುವಕರನ್ನು ಬೆದರಿಸಿ 20ಲಕ್ಷ ರೂ.ದರೋಡೆ ಮಾಡಿದ ಘಟನೆ ಬೆಂಗಳೂರಿನ ಮಡಿವಾಳದ ಖಾಸಗಿ ಹೋಟೆಲ್ನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಅಪರಾಧ ತನಿಖಾ ಇಲಾಖೆ(ಸಿಐಡಿ)ಇನ್ಸ್ ಪೆಕ್ಟರ್ ಒಬ್ಬರು ಈ ದರೋಡೆಯಲ್ಲಿ ಭಾಗಿಯಾಗಿದ್ದಾರೆ ಎಂದು ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಾಪಾರ ಉದ್ದೇಶಗಳಿಗಾಗಿ ಹಣವನ್ನು ತಂದಿದ್ದ ಕೇರಳದ ಉದ್ಯಮಿಗಳು ಮಡಿವಾಳದ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಬಗ್ಗೆ ನಿಖರ ಮಾಹಿತಿ ಪಡೆದಿದ್ದ ಇನ್ಸ್ ಪೆಕ್ಟರ್ ಮತ್ತು ಹ್ಯಾರಿಸ್, ಕುಪೇಂದ್ರ ಎಂಬುವವರು ಸೇರಿ ದರೋಡೆಗೆ ಯೋಜನೆ ರೂಪಿಸಿದ್ದರು ಎನ್ನಲಾಗಿದೆ.
ಯೋಜನೆಯಂತೆ ಇಬ್ಬರು ಹೋಟೆಲ್ ಕೋಣೆಗೆ ನುಗ್ಗಿ, ತಾವು ಪೊಲೀಸರೆಂದು ಇನ್ಸ್ ಪೆಕ್ಟರ್ ಅವರ ಅಧಿಕೃತ ಗುರುತಿನ ಚೀಟಿ ತೋರಿಸಿ, ‘ಅಕ್ರಮವಾಗಿ ಟ್ರೇಡಿಂಗ್ ಮಾಡಲು ಹಣ ತಂದಿದ್ದೀರಿ’ ಎಂದು ಉದ್ಯಮಿಗಳನ್ನು ಬೆದರಿಸಿ, ಬಳಿಕ ಅವರಿಂದ 20ಲಕ್ಷ ರೂ.ನಗದನ್ನು ಕಸಿದುಕೊಂಡು, ಹೊರಗೆ ನಿಂತಿದ್ದ ಪೊಲೀಸ್ ವಾಹನದಲ್ಲೇ ಪರಾರಿಯಾಗಿದ್ದರು ಎಂದು ಕೇರಳ ಮೂಲದ ಯುವಕರು ಮಡಿವಾಳ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ಕುರಿತಾಗಿ ಮಡಿವಾಳ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆದಿದ್ದು, ಕುಪೇಂದ್ರ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಸದ್ಯ ಸಿಐಡಿ ಇನ್ಸ್ ಪೆಕ್ಟರ್ ಗೆ ಸೇರಿದ ಪೊಲೀಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸಿಐಡಿ ಇನ್ಸ್ ಪೆಕ್ಟರ್ ತನ್ನ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರೆಯುತ್ತಿದೆ.
ಪೊಲೀಸ್ ಆಯುಕ್ತರ ಪ್ರತಿಕ್ರಿಯೆ: ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಮಾತನಾಡಿ, ‘ನಿನ್ನೆ ತಡರಾತ್ರಿ ಮಡಿವಾಳ ಪೊಲೀಸ್ ಠಾಣೆಗೆ ದೂರು ಬಂದಿದೆ. ಇಬ್ಬರು ವ್ಯಕ್ತಿಗಳು ಹೋಟೆಲ್ ನಲ್ಲಿ ಹಣ ಇಟ್ಟುಕೊಂಡಿದ್ದರು. ಪೊಲೀಸರು ಎಂದು ಹೇಳಿ ಹೋಟೆಲ್ಗೆ ಒಳಗೆ ನುಗ್ಗಿದ ಇಬ್ಬರು ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ಪ್ರಕರಣದಲ್ಲಿ ಇನ್ಸ್ ಪೆಕ್ಟರ್ ಒಬ್ಬರ ಪಾತ್ರ ಬಗ್ಗೆ ಮಾಹಿತಿ ಬಂದಿದೆ. ಅದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಹಣವನ್ನು ಹಾಗೂ ಕೃತ್ಯಕ್ಕೆ ಬಳಕೆಯಾದ ಪೊಲೀಸ್ ಇಲಾಖೆಯ ವಾಹನ ವಶಕ್ಕೆ ಪಡೆಯಲಾಗಿದೆ. ದೂರುದಾರರ ಹಿನ್ನಲೆಯನ್ನೂ ಪರಿಶೀಲನೆ ಮಾಡಲಾಗುತ್ತಿದೆ. ಸದ್ಯ ಇನ್ಸ್ ಪೆಕ್ಟರ್ ಪರಾರಿಯಾಗಿದ್ದು ಅವರಿಗೆ ಹುಡುಕಾಟ ನಡೆಸಲಾಗುತ್ತಿದೆ’ ಎಂದಿದ್ದಾರೆ.






