Bengaluru | ಕ್ರಿಪ್ಟೊ ಕರೆನ್ಸಿಗೆ ಬದಲಾವಣೆ ಮಾಡಿಕೊಡುವುದಾಗಿ ವಂಚನೆ, 12 ಮಂದಿ ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ | PC : AI
ಬೆಂಗಳೂರು : ಭಾರತೀಯ ರೂಪಾಯಿಯನ್ನು ಕ್ರಿಪ್ಟೊ ಕರೆನ್ಸಿಗೆ ಬದಲಾವಣೆ ಮಾಡಿಕೊಡುವುದಾಗಿ ಹೇಳಿ ಉದ್ಯಮಿಯೊಬ್ಬರಿಂದ ಹಣ ದರೋಡೆ ಮಾಡಿದ್ದ 12 ಮಂದಿ ಆರೋಪಿಗಳನ್ನು ಸಂಜಯನಗರ ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಗಳಿಂದ 13,90,000 ರೂ. ನಗದು, ಕೃತ್ಯಕ್ಕೆ ಬಳಸಿದ 6 ದ್ವಿಚಕ್ರ ವಾಹನ, ಒಂದು ಕಾರು ಮತ್ತು 13 ಮೊಬೈಲ್ ಫೋನ್ಗಳ ವಶಕ್ಕೆ ಪಡೆದಿದ್ದಾರೆ.
ಹಣ ಕಳೆದುಕೊಂಡ ಉದ್ಯಮಿಯು ಶಿರಾ ಹೈವೇ ರಸ್ತೆಯಲ್ಲಿ ಕೆಫೆ ಓಪನ್ ಮಾಡಲು ಯೋಜನೆ ಮಾಡಿ, ಕಿಚನ್ ಟೈಲ್ಸ್ ಸೇರಿದಂತೆ ಇತರೆ ವಸ್ತುಗಳನ್ನು ಇಂಟರ್ನೆಟ್ನಲ್ಲಿ ಹುಡುಕುತ್ತಿದ್ದರು. ವಸ್ತುಗಳನ್ನು ಜಪಾನ್ ಅಥವಾ ಚೈನಾ ದೇಶದಿಂದ ಕಡಿಮೆ ದರದಲ್ಲಿ ದೊರೆಯುವುದಾಗಿ ಅವರ ಸ್ನೇಹಿತರೊಬ್ಬರಿಂದ ತಿಳಿದುಕೊಂಡು ವಸ್ತುಗಳ ಖರೀದಿಗೆ ಮುಂದಾದರು. ಕ್ರಿಪ್ಟೊ ಕರೆನ್ಸಿಯಲ್ಲಿ ಹಣವನ್ನು ಸಂದಾಯ ಮಾಡಬೇಕಾಗಿರುವುದರಿಂದ ತಮ್ಮ ಸ್ನೇಹಿತರೊಬ್ಬರಿಂದ ಕ್ರಿಪ್ಟೊ ಕರೆನ್ಸಿ ಬಗ್ಗೆ ಮಾಹಿತಿ ಪಡೆದು ವಾಟ್ಸಪ್ ಗ್ರೂಪ್ಗೆ ಸೇರಿದ್ದರು.
ವಾಟ್ಸಪ್ ಗ್ರೂಪ್ನ ಸದಸ್ಯರಲ್ಲಿ ಒಬ್ಬರ ಪರಿಚಯವಾಗಿ ಆತನು ಉದ್ಯಮಿಯ ಮನೆಗೆ ಬಂದು 2,50,000 ರೂ. ಹಣವನ್ನು ಯು.ಎಸ್.ಡಿ.ಟಿ ಕ್ರಿಪ್ಟೊ ಕರೆನ್ಸಿಗೆ ಬದಲಾವಣೆ ಮಾಡಿ ಕೊಟ್ಟು ಹೋಗಿದ್ದನು. ಉದ್ಯಮಿಗೆ ಹೆಚ್ಚಿನ ಕ್ರಿಪ್ಟೊ ಕರೆನ್ಸಿ ಅವಶ್ಯಕತೆ ಇರುವುದರಿಂದ ವಾಟ್ಸಪ್ ಮುಖಾಂತರ ಸಂಪರ್ಕಿಸಿ 17,64,000 ರೂ. ಹಣವನ್ನು ಕ್ರಿಪ್ಟೊ ಕರೆನ್ಸಿಗೆ ಬದಲಾವಣೆ ಮಾಡಿ ಕೊಡುವಂತೆ ಕೇಳಿದ್ದನು.
ಉದ್ಯಮಿಯು ತಮ್ಮ ಹಾಗೂ ಸ್ನೇಹಿತರೊಂದಿಗೆ 17,64,000 ರೂ. ಹಣವನ್ನು ತೆಗೆದುಕೊಂಡು ಸಂಜಯನಗರದ ಕಲ್ಪನಾ ಚಾವ್ಲಾ ರಸ್ತೆಗೆ ಬರಲು ತಿಳಿಸಿದ ಕಾರಣ ಸ್ಥಳಕ್ಕೆ ಬಂದಿದ್ದರು. ಹೇಳಿದ್ದ ಸಮಯದಕ್ಕೆ ಬಂದ ಆರೋಪಿಗಳು ಹಣವನ್ನು ಕ್ರಿಪ್ಟೊ ಕರೆನ್ಸಿಗೆ ವರ್ಗಾವಣೆ ಮಾಡದೇ ಹಣವನ್ನು ಕಿತ್ತುಕೊಂಡು ಓಡಿ ಹೋಗಿದ್ದರು. ಈ ಕುರಿತು ಸಂಜಯನಗರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೆÇಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಖಚಿತ ಮಾಹಿತಿಯನ್ನು ಕಲೆಹಾಕಿ, ದೇವಸಂದ್ರದ ಬಳಿ 4 ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆ ಮಾಡಿದಾಗ, ಈ ಪ್ರಕರಣದಲ್ಲಿ ಒಟ್ಟು 12 ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು 12 ಮಂದಿ ಆರೋಪಿಗಳನ್ನು ಬಂಧಿಸಿ, 13,90,000 ರೂ. ನಗದು, ಕೃತ್ಯಕ್ಕೆ ಬಳಸಿದ 6 ದ್ವಿಚಕ್ರ ವಾಹನ, ಒಂದು ಕಾರು ಮತ್ತು 13 ಮೊಬೈಲ್ ಫೋನ್ಗಳ ವಶಕ್ಕೆ ಪಡೆದಿದ್ದಾರೆ.






