Bengaluru | ನಾಡಬಾಂಬ್ ಸ್ಪೋಟ: ತೀವ್ರವಾಗಿ ಗಾಯಗೊಂಡ ವಕೀಲ

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ನಾಡಬಾಂಬ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ವಕೀಲರೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ಸಮೀಪದ ಸುಣ್ಣಘಟ್ಟ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಎನ್.ಸಿ. ಮೋಹನ್ ಎಂಬುವವರು ಗಾಯಗೊಂಡ ವಕೀಲರಾಗಿದ್ದು, ಅವರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಮೋಹನ್ ಸುಣ್ಣಘಟ್ಟ ಗ್ರಾಮದ ಜಮೀನಿನಲ್ಲಿ ಫಾರ್ಮ್ಹೌಸ್ ಮಾಡಿಕೊಂಡಿದ್ದರು. ಗುರುವಾರ ತಡರಾತ್ರಿ ತಮ್ಮ ಫಾರ್ಮ್ ಹೌಸ್ಗೆ ಬಂದು ತಂಗಿದ್ದರು. ಈ ವೇಳೆ ಯಾರೋ ಕಿಡಿಗೇಡಿಗಳು, ಫಾರ್ಮ್ ಹೌಸ್ನ ಗೇಟ್ ಬಳಿ ನಾಡಬಾಂಬ್ ಇಟ್ಟಿದ್ದಾರೆ. ಅದನ್ನು ಗಮನಿಸದೆ ಮೋಹನ್ ಅವರು ಫಾರ್ಮ್ ಹೌಸ್ನಿಂದ ಹೊರಬಂದು, ಬಾಂಬ್ ಮೇಲೆ ಕಾಲಿಟ್ಟಿದ್ದಾರೆ. ಈ ವೇಳೆ ನಾಡಬಾಂಬ್ ಸ್ಫೋಟಗೊಂಡಿದ್ದು, ವಕೀಲ ತೀವ್ರವಾಗಿ ಗಾಯಗೊಂಡಿದ್ದಾರೆ.
ಈ ಸಂಬಂಧ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡು ಪ್ರಾಣಿಗಳ ಬೇಟೆಗೆ ನಾಡಬಾಂಬ್ ಇಡಲಾಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿದ್ದು, ಪ್ರಕರಣದ ತನಿಖೆಯನ್ನು ಮುಂದುವರೆಯುತ್ತಿದೆ.




