Bengaluru | ವೀಡಿಯೊ ಕರೆಯಲ್ಲಿ ಕ್ರಿಕೆಟಿಗನ ನಗ್ನಗೊಳಿಸಿ ಹಣಕ್ಕೆ ಬೇಡಿಕೆ: ಯುವತಿಯ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು : ಮಹಾರಾಷ್ಟ್ರ ಕ್ರಿಕೆಟ್ ತಂಡದ ಯುವ ಆಟಗಾರನೊಬ್ಬನನ್ನು ವೀಡಿಯೊ ಕರೆಯಲ್ಲಿ ನಗ್ನಗೊಳಿಸಿ ರೆಕಾರ್ಡ್ ಮಾಡಿಕೊಂಡ ಬೆಂಗಳೂರಿನ ಯುವತಿ, ಹಣಕ್ಕಾಗಿ ಬೇಡಿಕೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು, ಯುವತಿಯ ವಿರುದ್ಧ ಈಶಾನ್ಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯ ಆಯೋಜನೆ ವೇಳೆ ಯುವ ಕ್ರಿಕೆಟಿಗ ಮಹಾರಾಷ್ಟ್ರದಿಂದ ನಗರಕ್ಕೆ ಬಂದು ಕಣ್ಣೂರಿನ ಪಂಚತಾರ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಡೇಟಿಂಗ್ ಅಪ್ಲಿಕೇಷನ್‌ವೊಂದರಲ್ಲಿ ನೋಂದಾಯಿಸಿಕೊಂಡಿದ್ದ ಆಟಗಾರನಿಗೆ ಜು.17ರ ರಾತ್ರಿ ಅಪರಿಚಿತ ಮಹಿಳೆಯಿಂದ ಸಂದೇಶ ಬಂದಿದೆ. ವಾಟ್ಸ್ ಆ್ಯಪ್ ಕರೆಯಲ್ಲಿ ಮಾತನಾಡುವಂತೆ ಹೇಳಿ ತನ್ನ ನಂಬರ್ ಶೇರ್ ಮಾಡಿದ್ದಾಳೆ. ಬಳಿಕ ಇಬ್ಬರು ವೀಡಿಯೊ ಕರೆಯಲ್ಲಿ ಮಾತನಾಡಿದ್ದರು.
ಯುವ ಕ್ರಿಕೆಟಿಗ ನಗ್ನವಾಗಿರುವ ವೀಡಿಯೊವನ್ನು ಸೆರೆ ಹಿಡಿದು ಕೆಲ ಹೊತ್ತಿನ ಬಳಿಕ ಕರೆ ಮಾಡಿ, ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿ, ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಆಟಗಾರ ಆನ್‌ಲೈನ್ ಮೂಲಕ 1,500 ರೂಪಾಯಿ ಕಳುಹಿಸಿದ್ದಾನೆ. ಆದರೂ ಹೆಚ್ಚಿನ ಹಣ ನೀಡುವಂತೆ ಯುವತಿ ಒತ್ತಾಯಿಸಿದ್ದಾಳೆ. ಹೀಗಾಗಿ ಕ್ರಿಕೆಟಿಗ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ.




