Bengaluru | ನೀಟ್ ರದ್ದುಗೊಳಿಸಲು ಆಗ್ರಹಿಸಿ ಎಸ್‍ಎಫ್‍ಐ ಹೋರಾಟ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯ

ಬೆಂಗಳೂರು : ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ, ನೀಟ್ ರದ್ದುಗೊಳಿಸಬೇಕೆಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ನೂರಾರು ವಿದ್ಯಾರ್ಥಿಗಳು ಹಾಗೂ ಯುವಜನರು ಭಾಗವಹಿಸಿ, ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆಗೆ ಸಿಲುಕಿದ್ದು, ಶಿಕ್ಷಣ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದರು.
ಈ ವೇಳೆ ಮಾತನಾಡಿದ ಎಸ್‍ಎಫ್‍ಐ ರಾಜ್ಯಾಧ್ಯಕ್ಷ ಶಿವಪ್ಪ ಅಂಬ್ಲಿಕಲ್, ‘ನಿನ್ನೆ ರಾತ್ರಿ ಪ್ರಧಾನಿ ಮೋದಿ ನೀಡಿದ ವಿಡಿಯೋ ಹೇಳಿಕೆಯಿಂದ ವಿದ್ಯಾರ್ಥಿಗಳ ಆತಂಕ ನಿವಾರಣೆಯಾಗುವುದಿಲ್ಲ. ಒಂದು ಹೇಳಿಕೆ ನೀಡಲು 26 ದಿನಗಳಕಾಲ ವಿದ್ಯಾರ್ಥಿಗಳು ಕಾಯಬೇಕಾದ ಪರಿಸ್ಥಿತಿ ಏಕೆ ನಿರ್ಮಾಣವಾಯಿತು? ಇದು ಜನರ ಆಕ್ರೋಶವನ್ನು ತಣಿಸುವ ಪ್ರಯತ್ನ ಮಾತ್ರ’ ಎಂದು ಟೀಕಿಸಿದರು.
ಪದೇ ಪದೇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ ಕೇಂದ್ರ ಸರಕಾರ ಸಮರ್ಪಕ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಹೀಗಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು ಹಾಗೂ ಶಿಕ್ಷಣ ಪರೀಕ್ಷಾ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆ ತರಲು ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.
ದಿಲ್ಲಿಯಲ್ಲಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು. ನೀಟ್ ಅಕ್ರಮಗಳ ಹಿನ್ನೆಲೆಯಲ್ಲಿ ಮೃತಪಟ್ಟಿರುವುದಾಗಿ ಹೇಳಲಾಗುತ್ತಿರುವ 21 ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಬೇಕು. ದೇಶದ ಯುವಕರು ಶಿಕ್ಷಣದ ಹಕ್ಕು ಮತ್ತು ಪಾರದರ್ಶಕ ಪರೀಕ್ಷಾ ವ್ಯವಸ್ಥೆಗಾಗಿ ಹೋರಾಟ ಮುಂದುವರಿಸಲಿದ್ದಾರೆ ಎಂದು ಹೇಳಿದರು.
ಈ ಹೋರಾಟದಲ್ಲಿ ಮುಖಂಡರಾದ ವಿಜಯ್ ಕುಮಾರ್, ದೊಡ್ಡ ಬಸವರಾಜ್, ಗಣೇಶ ರಾಠೋಡ್, ಅರ್ಪಿತಾ ಗ್ರೇಸಿ, ವೆಂಕಟೇಶ್, ಶರಣ್ಯ, ಪರಿವರ್ತನಾ, ವೈಶಾಲಿ, ಮಣಿಭಾರತಿ, ಪ್ರಭು ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.






