Bengaluru | ಮೆಟ್ರೊ ರೈಲು ಹಳಿಗೆ ಹಾರಿದ ವ್ಯಕ್ತಿ ಸಾವು

ಸಾಂದರ್ಭಿಕ ಚಿತ್ರ
ಬೆಂಗಳೂರು : ನಮ್ಮ ಮೆಟ್ರೊ ಹಳದಿ ಮಾರ್ಗದ ಹುಸ್ಕೂರು ರಸ್ತೆ ಮೆಟ್ರೊ ನಿಲ್ದಾಣದಲ್ಲಿ ರೈಲು ಹಳಿಗೆ ಹಾರಿದ ವ್ಯಕ್ತಿಯೊಬ್ಬ ಗಂಭೀರ ಗಾಯಗೊಂಡು ಮೃತಪಟ್ಟಿರುವ ಘಟನೆ ಸೋಮವಾರದಂದು ನಡೆದಿದ್ದು, ಘಟನೆಯಿಂದಾಗಿ ಮೆಟ್ರೊ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು.
ಸಂಜೆ ಸುಮಾರು 5.50ರ ಹೊತ್ತಿಗೆ ಮೆಟ್ರೊ ರೈಲು ಬರುವ ಹೊತ್ತಿಗೆ ಸುಮಾರು 35 ವರ್ಷದ ಪ್ರಯಾಣಿಕರೊಬ್ಬರು ಹಳಿಗೆ ಹಾರಿದ್ದರು. ನಿಲ್ದಾಣ ನಿಯಂತ್ರಕ ಮತ್ತು ಭದ್ರತಾ ಸಿಬ್ಬಂದಿ ತಕ್ಷಣ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದರು. ಮೆಟ್ರೊ ರೈಲಿನ ಅಡಿಯಲ್ಲಿ ಸಿಲುಕಿಕೊಂಡಿದ್ದ ಅವರನ್ನು ಸಿಬ್ಬಂದಿ ಹರಸಾಹಸ ಮಾಡಿ ಮೇಲಕ್ಕೆತ್ತಿದ್ದರು. ಅಷ್ಟು ಹೊತ್ತಿಗೆ ಅವರು ಮೃತಪಟ್ಟಿದ್ದಾರೆ.
ಇದರಿಂದಾಗಿ ಎಲೆಕ್ಟ್ರಾನಿಕ್ ಸಿಟಿಯಿಂದ ಬೊಮ್ಮಸಂದ್ರ ಕಡೆಗೆ ಮೆಟ್ರೊ ರೈಲುಗಳು ಸ್ಥಗಿತಗೊಂಡವು. ಆರ್.ವಿ. ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಮಾತ್ರ ಸಂಚಾರ ಮುಂದುವರಿದಿದೆ. ಹಳಿಗೆ ಹಾರಿದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
.....................




