Bengaluru | ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಬೆಂಗಳೂರು : ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಜೀವ ಬೆದರಿಕೆ ಹಾಕಿರುವ ಹಾಗೂ ಸಮಾಜದ ಸಾಮರಸ್ಯ ಹಾಳು ಮಾಡುವಂತಹ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಬುಧವಾರ ನಗರದಲ್ಲಿ ರಾಹುಲ್ ಗಾಂಧಿ ಅವರಿಗೆ ಜೀವ ಬೆದರಿಕೆ ಹಾಕಿರುವ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಪ್ರತಿಭಟನೆ ನಡೆಸಿ, ಬಿಜೆಪಿಯವರು ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಪಕ್ಷದ ರಾಷ್ಟ್ರ ನಾಯಕರ ವಿರುದ್ಧ ಹಾಗೂ ಪೊಲೀಸರ ವಿರುದ್ಧ ಅವಹೇಳನಕಾರಿ ಹೇಳಿಕೆ ಮತ್ತು ಬೆದರಿಕೆಯನ್ನು ಹಾಕುವ ಮೂಲಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ ಇಂತಹ ಬಿಜೆಪಿಯ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಮಾತನಾಡಿದರು. ಇದೇ ವೇಳೆ ಶಾಸಕ ಯಶ್ಪಾಲ್ ಸುವರ್ಣ ಅವರ ಭಾವಚಿತ್ರವನ್ನು ದಹಿಸಲಾಯಿತು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಎಸ್.ಆನಂದ್ ಕುಮಾರ್, ಕುಶಾಲ್ ಹರುವೇಗೌಡ, ಮುರುಳಿ, ಪುಟ್ಟರಾಜು ಮಾಧವ ಹನೂರು, ಓಬಳೇಶ್ ಮತ್ತಿತರರು ಹಾಜರಿದ್ದರು.




