Bengaluru | ಕೊಕೇನ್ ಸಾಗಿಸುತ್ತಿದ್ದ ಆರೋಪಿ ಬಂಧನ; 50ಲಕ್ಷ ರೂ. ಮೌಲ್ಯದ ಮಾಲು ಜಪ್ತಿ

ಬೆಂಗಳೂರು : ಬೈಕ್ ಆಧಾರಿತ ಡೆಲಿವರಿ ಸೇವೆ ಬಳಸಿಕೊಂಡು ಕೊಕೇನ್ ಸಾಗಿಸುತ್ತಿದ್ದ ಆರೋಪಿಯೊಬ್ಬನನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದು, 50ಲಕ್ಷ ರೂ.ಮೌಲ್ಯದ 116.3 ಗ್ರಾಂ ಕೊಕೇನ್ ಅನ್ನು ಜಪ್ತಿ ಮಾಡಿದ್ದಾರೆ. ಉತ್ತರಪ್ರದೇಶ ಮೂಲದ ರಾಜು(30) ಬಂಧಿತ ಆರೋಪಿಯಾಗಿದ್ದಾನೆ ಎಂದು ಗುರುತಿಸಲಾಗಿದೆ.
ಚಾಮರಾಜಪೇಟೆ ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲಿ ಅನುಮಾನಾಸ್ಪದವಾಗಿ ಪದೇಪದೆ ಡೆಲಿವರಿ ಬೈಕ್‍ಗಳು ಅಪಾರ್ಟ್‍ಮೆಂಟ್ ಬಳಿ ಬರುತ್ತಿದ್ದವು. ಪೊಲೀಸರು ಡೆಲಿವರಿ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ತಡೆದು, ಪಾರ್ಸೆಲ್ ಪರಿಶೀಲಿಸಿದಾಗ ಸಣ್ಣ ಚಾಕೊಲೇಟ್ ಬಾಕ್ಸ್ ಗಳ ಒಳಗೆ ಕೊಕೇನ್ ಅನ್ನು ಬಚ್ಚಿಟ್ಟು ಸಾಗಿಸುತ್ತಿರುವುದು ಪತ್ತೆಯಾಗಿದೆ.
ಆತನನ್ನು ವಿಚಾರಣೆ ನಡೆಸಿದಾಗ, ಪಾರ್ಸೆಲ್‍ಗಳನ್ನು ಆರೋಪಿ ರಾಜು ಬುಕ್ ಮಾಡಿರುವುದು ಗೊತ್ತಾಗಿದೆ. ಕೇವಲ 50 ರೂ. ಡೆಲಿವರಿ ಶುಲ್ಕವಿದ್ದರೂ, ವೇಗವಾಗಿ ಡೆಲಿವರಿ ಮಾಡಿಸಲು ಹಾಗೂ ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳಲು ರಾಜು ಪ್ರತಿ ರೈಡರ್‍ಗೆ ಸುಮಾರು 300 ರೂ. ಟಿಪ್ ನೀಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಸ್ಥಳದಲ್ಲೇ ರಾಜುವನ್ನು ಬಂಧಿಸಿದ್ದಾರೆ. ಆತನಿಂದ 116.3 ಗ್ರಾಂ ಕೊಕೇನ್ ಜಪ್ತಿ ಮಾಡಿದ್ದು, ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ. ಇನ್ನು ಪ್ರಕರಣದಲ್ಲಿ ಶಾಮೀಲಾದ ಮತ್ತೊಬ್ಬ ಆರೋಪಿ ಅಕ್ಷಿತ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಮುಂದುವರೆದಿದೆ ಎಂದು ತಿಳಿದು ಬಂದಿದೆ.






