Bengaluru | 1,780 ಬಿಡಾಡಿ ವಾಹನಗಳಿಗೆ ನೋಟಿಸ್ ಸ್ಟಿಕ್ಕರ್: ಕಾರ್ಯಾಚರಣೆ ಚುರುಕು

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ನಗರದಲ್ಲಿ ಅನಧಿಕೃತವಾಗಿ ನಿಲುಗಡೆ ಮಾಡಿರುವ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿರುವ ಬಿಡಾಡಿ ವಾಹನಗಳ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಮತ್ತು ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆ ಚುರುಕು ಪಡೆದಿದೆ.
ಜುಲೈ 10ರಿಂದ ಅರಂಭವಾದ ಕಾರ್ಯಾಚರಣೆಯಲ್ಲಿ ಇಂದಿನವರೆಗೆ ಒಟ್ಟು 6,544 ವಾಹನಗಳನ್ನು ಗುರುತಿಸಲಾಗಿದೆ. ಅವುಗಳ ಪೈಕಿ ಸಾರ್ವಜನಿಕರಿಂದ ಬಂದ ದೂರುಗಳನ್ನು ಆಧರಿಸಿ 4,108 ವಾಹನಗಳನ್ನು ಗುರುತಿಸಲಾಗಿದ್ದು, ಇನ್ನುಳಿದ 2,436 ವಾಹನಗಳನ್ನು ಪಾಲಿಕೆ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಗುರುತಿಸಲಾಗಿದೆ ಎಂದು ಜಿಬಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆ ಆರಂಭವಾದಾಗಿನಿಂದ ಪ್ರತಿ ನಿತ್ಯ 50-100 ವಾಹನಗಳಂತೆ ಇದುವರೆಗೂ ಒಟ್ಟು 1,780 ವಾಹನಗಳಿಗೆ ನೋಟಿಸ್ ಸ್ಟಿಕ್ಕರ್ ಅಂಟಿಸಲಾಗಿದೆ. ಸೂಚಿಸಲಾದ ನಿಯಮಗಳ ಪ್ರಕಾರ ನೋಟಿಸ್ ಸ್ಟಿಕ್ಕರ್ ಅಂಟಿಸಿದ 7 ದಿನಗಳ ಒಳಗೆ ಮಾಲಕರು ಆ ವಾಹನವನ್ನು ತೆರವು ಮಾಡದಿದ್ದರೆ, ಟೋಯಿಂಗ್ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಅಂತಹ 352 ವಾಹನಗಳನ್ನು ಟೋಯಿಂಗ್ ಮಾಡಿ ನಿಗದಿತ ಸ್ಥಳಗಳಲ್ಲಿ ನಿಲ್ಲಿಸಲಾಗಿದೆ. ಆ ವಾಹನಗಳನ್ನು ಬಿಡಿಸಿಕೊಳ್ಳಲು ಮಾಲಕರಿಗೆ 15 ದಿನಗಳ ಗಡುವು ನೀಡಲಾಗುತ್ತದೆ. ಆಗಲೂ ಸಹ ಮಾಲಕರು ಬರದಿದ್ದಾಗ ಕಾನೂನುಬದ್ಧವಾಗಿ ಹರಾಜು ಮಾಡಲಾಗುತ್ತದೆ. ಟೋಯಿಂಗ್ ಮಾಡಲಾದ ವಾಹನಗಳ ಪೈಕಿ ಕೆಲವು ವಾಹನಗಳ ಮಾಲಕರು ನೋ ಪಾರ್ಕಿಂಗ್ ಶುಲ್ಕ ಪಾವತಿಸಿ ತಮ್ಮ ವಾಹನಗಳನ್ನು ಹಿಂಪಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






