ಬೆಂಗಳೂರಿನಲ್ಲಿ 105 ಬಾಂಗ್ಲಾ ಪ್ರಜೆಗಳನ್ನು ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು : ವೈಟ್‌ಫೀಲ್ಡ್ ಮತ್ತು ಇಲೆಕ್ಟ್ರಾನಿಕ್ ಸಿಟಿ ವಿಭಾಗಗಳ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ 105 ಬಾಂಗ್ಲಾದೇಶದ ಪ್ರಜೆಗಳನ್ನು ವಶಕ್ಕೆ ಪಡೆದು, ಕಾನೂನು ಕ್ರಮಕ್ಕಾಗಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ(ಎಫ್‌ಆರ್‌ಆರ್‌ಒ) ಮುಂದೆ ವರದಿಯೊಂದಿಗೆ ಹಾಜರುಪಡಿಸಿದ್ದಾರೆ.
ಇಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಪೊಲೀಸರು 29 ಸ್ಥಳಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 1,909 ಮಂದಿಯನ್ನು ಪರಿಶೀಲಿಸಿದ್ದಾರೆ. ಇವರಲ್ಲಿ 43 ಮಂದಿ ಬಾಂಗ್ಲಾದೇಶದ ಪ್ರಜೆಗಳಾಗಿದ್ದು, ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂದು ದೃಢಪಟ್ಟಿದೆ. ಇನ್ನು ವೈಟ್‌ಫೀಲ್ಡ್ ಉಪವಿಭಾಗದ ಪೊಲೀಸರು 35 ಸ್ಥಳಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 1,035 ಮಂದಿಯನ್ನು ಪರಿಶೀಲಿಸಿದ್ದಾರೆ. ಇವರಲ್ಲಿ 62 ಮಂದಿ ಬಾಂಗ್ಲಾದೇಶದ ಪ್ರಜೆಗಳಾಗಿದ್ದು, ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂದು ದೃಢಪಟ್ಟಿದೆ.
ಅಕ್ರಮ ವಲಸಿಗರ ಬಳಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಮೂಲದವರು ಎಂದು ನಮೂದಿಸಿರುವ ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ. ಅವರ ವೀಸಾ, ಪಾಸ್‌ಪೋರ್ಟ್ ಹಾಗೂ ರಾಷ್ಟ್ರೀಯತೆಗೆ ಸಂಬಂಧಿಸಿದ ಇತರ ದಾಖಲೆಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.




