Bengaluru | ಲಿಫ್ಟ್ ನಲ್ಲಿ ಸಿಲುಕಿಕೊಂಡಿದ್ದ ಮೂವರು ವ್ಯಕ್ತಿಗಳ ರಕ್ಷಣೆ

ಸಾಂದರ್ಭಿಕ ಚಿತ್ರ | Image by magnific
ಬೆಂಗಳೂರು : ಜೆ.ಪಿ.ನಗರ 8ನೇ ಹಂತದಲ್ಲಿರುವ ಅಪಾರ್ಟ್ ಮೆಂಟ್ವೊಂದರ ಲಿಫ್ಟ್ನಲ್ಲಿ ಸಿಲುಕಿದ್ದ ಇಬ್ಬರು ಮಹಿಳೆಯರು ಸೇರಿ ಮೂವರು ವ್ಯಕ್ತಿಗಳನ್ನು ಕೋಣನಕುಂಟೆ ಠಾಣಾ ಪೊಲೀಸರು ರಕ್ಷಿಸಿದ್ದಾರೆ.
ತಾಂತ್ರಿಕ ದೋಷದಿಂದ ಮೂವರು ವ್ಯಕ್ತಿಗಳು ಲಿಫ್ಟ್ ನಲ್ಲಿ ಸಿಲುಕಿದ್ದರು. ಸಿಲುಕಿಕೊಂಡವರ ಪೈಕಿ ಓರ್ವ ವ್ಯಕ್ತಿಯು ‘ನಮ್ಮ-112’ ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸರ ಸಹಾಯ ಕೋರಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ನಮ್ಮ 112 ಸಿಬ್ಬಂದಿಯವರು, ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಹೊಯ್ಸಳ ಸಿಬ್ಬಂದಿಗೆ ಕರೆ ಮಾಡಿ, ಮಾಹಿತಿಯನ್ನು ರವಾನಿಸಿದ್ದಾರೆ.
ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ತೆರಳಿದ ಪೊಲೀಸ್ ಸಿಬ್ಬಂದಿಯವರು, ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಅಪಾರ್ಟ್ಮೆಂಟ್ನ ನಿರ್ವಹಣಾ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ಸ್ಥಗಿತಗೊಂಡಿದ್ದ ಲಿಪ್ಪನ್ನು ಸುರಕ್ಷಿತವಾಗಿ ತೆರೆಯಲು ಕ್ರಮ ಕೈಗೊಂಡು, ಒಳಗೆ ಸಿಲುಕಿದ್ದ ಒಂದೇ ಕುಟುಂಬದ ಮೂವರನ್ನೂ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ.




