ಬೆಂಗಳೂರಿನಲ್ಲಿ 800 ಕೆ.ಜಿಗೂ ಹೆಚ್ಚು ಜಿಲೆಟಿನ್ ವಶ; ಎಫ್‍ಐಆರ್ ದಾಖಲು

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡ ಕಾಮಗಾರಿಗೆ ಅಕ್ರಮವಾಗಿ ಜಿಲೆಟಿನ್ ಅನ್ನು ಬಳಸಲಾಗುತ್ತಿದೆ ಎಂಬ ಆರೋಪದ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ ಬೆಳ್ಳಂದೂರು ಠಾಣಾ ಪೊಲೀಸರು, ಸುಮಾರು 800ಕೆಜಿಗೂ ಹೆಚ್ಚು ತೂಕದ ಜಿಲೆಟಿನ್ ಕಡ್ಡಿಗಳನ್ನು ವಶಪಡಿಸಿಕೊಂಡು, ಕಾಮಗಾರಿ ನಡೆಸುತ್ತಿರುವವರ ಮೇಲೆ ಎಫ್‍ಐಆರ್ ದಾಖಲಾಗಿದೆ.
ನಗರದ ಬೆಳ್ಳಂದೂರು ಸಮೀಪದ ಭೋಗನಹಳ್ಳಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯ ವೇಳೆ ದೊಡ್ಡ ಕಲ್ಲಿನ ಬಂಡೆಗಳು ಪತ್ತೆಯಾಗಿವೆ. ಅವುಗಳನ್ನು ತೆರವುಗೊಳಿಸಲು ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳದೆ ಜಿಲೆಟಿನ್ ಬಳಸಿ ಬಂಡೆಗಳನ್ನು ಸ್ಫೋಟಿಸಲಾಗುತ್ತಿದೆ ಎಂದು ಸ್ಥಳೀಯರು ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ರಾತ್ರಿ 12 ಗಂಟೆಯ ಬಳಿಕ ಬ್ಲಾಸ್ಟಿಂಗ್ ನಡೆಸಲಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಕಟ್ಟಡ ಕಾಮಗಾರಿ ನಡೆಯುತ್ತಿರುವ ಪ್ರದೇಶದ ಸಮೀಪವೇ ಶಾಲೆ ಇದ್ದು, ಶಾಲೆಯ ಸಮೀಪವೇ ಸ್ಫೋಟಕ ವಸ್ತುಗಳನ್ನು ಬಳಸುತ್ತಿರುವುದರಿಂದ ಮಕ್ಕಳ ಸುರಕ್ಷತೆ ಬಗ್ಗೆಯೂ ಆತಂಕ ಸೃಷ್ಟಿಯಾಗಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿ ಬೆಳ್ಳಂದೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ 800 ಕೆಜಿಗೂ ಹೆಚ್ಚು ಜಿಲೆಟಿನ್ ವಶಪಡಿಸಿಕೊಂಡಿದ್ದಾರೆ. ನಿರ್ಮಾಣ ಸ್ಥಳದಲ್ಲಿ ಸ್ಫೋಟಕ ವಸ್ತುಗಳನ್ನು ಯಾವ ರೀತಿಯಲ್ಲಿ ಸಂಗ್ರಹಿಸಲಾಗಿತ್ತು, ಅವುಗಳ ಬಳಕೆಗೆ ಅನುಮತಿ ಇತ್ತೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.






