Bengaluru | ಪ್ರಿಯಕರನ ಜೊತೆಗೂಡಿ ಪತಿ, ಮಗನ ಕೊಲೆ ಆರೋಪ; ಪತ್ನಿಯ ಬಂಧನ

ಬೆಂಗಳೂರು : ಪ್ರಿಯಕರನ ಜೊತೆಗೂಡಿ ಪತಿ ಮತ್ತು ಮಗನನ್ನು ಕೊಲೆ ಮಾಡಿರುವ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಚಿಕ್ಕಬಾಣಾವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹರಿಣಿ (26) ಬಂಧಿತ ಆರೋಪಿ ಎಂದು ಗುರುತಿಸಲಾಗಿದ್ದು, ಕೃತ್ಯ ಎಸಗಿ ಪರಾರಿಯಾಗಿರುವ ಆಕೆಯ ಪ್ರಿಯಕರನಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ನಗರದಲ್ಲಿ 35 ವರ್ಷದ ಅಭಿನಂದನ್ ಹಾಗೂ ಅವರ 5 ವರ್ಷದ ಮಗ ಯದುವೀರ್ ಅನುಮಾನಾಸ್ಪದ ಸಾವಿನಪ್ಪಿದ್ದರು. ಪತಿ ಮತ್ತು ಮಗ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ಪತ್ನಿ ಹರಿಣಿ ಸ್ವತಃ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ, ಮಾಹಿತಿ ನೀಡಿದ್ದರು. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ನಡೆಸಿ, ಪ್ರಮುಖ ಆರೋಪಿಯಾದ ಹರಿಣಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ವೇಳೆ ಆರೋಪಿ ಹರಿಣಿ ತನ್ನ ಪ್ರಿಯಕರ ವಿನಯ್ ಜೊತೆ ಸೇರಿ ಎಸಗಿದ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾಳೆ.
ದಂಪತಿ ನಡುವೆ ನಿರಂತರ ಕೌಟುಂಬಿಕ ಕಲಹ ನಡೆಯುತ್ತಿತ್ತು. ಹರಿಣಿ ಮೂರು ತಿಂಗಳ ಹಿಂದೆಯಷ್ಟೇ ಡೆತ್‍ನೋಟ್ ಮಾದರಿಯ ಪತ್ರ ಬರೆದಿಟ್ಟು ಮನೆ ತೊರೆದಿದ್ದಳು. ಮನೆಯಲ್ಲಿ ಹಿರಿಯರು ರಾಜಿ ಮಾಡಿ ಇಬ್ಬರೂ ಪುನಃ ಸಂಸಾರ ಮಾಡಿಕೊಂಡು ಹೋಗುವಂತೆ ಬುದ್ಧಿ ಹೇಳಿದ್ದರು. ಆದರೆ, ಹರಿಣಿ ರವಿವಾರ ರಾತ್ರಿ 11 ಗಂಟೆಗೆ ಪ್ರಿಯಕರ ವಿನಯ್‍ನನ್ನು ಕರೆಸಿಕೊಂಡಿದ್ದಾಳೆ. ಆತ ಮನೆಗೆ ಬರುವ ಸಂದರ್ಭದಲ್ಲಿ ಮನೆಯ ಸಿಸಿ ಕ್ಯಾಮರಾವನ್ನು ಸ್ಥಗಿತಗೊಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಹಾಸಿಗೆಯಲ್ಲಿ ಮಲಗಿದ್ದ ಗಂಡ ಅಭಿನಂದನ್ ತಲೆಗೆ ಸೌಟ್‍ನಿಂದ ಹಲ್ಲೆ ನಡೆಸಿ ಇಬ್ಬರೂ ಹತ್ಯೆ ಮಾಡಿದ್ದಾರೆ. ಅಪ್ಪನಿಗೆ ಹೊಡೆದು ಹತ್ಯೆ ಎಸಗುತ್ತಿರುವುದನ್ನು ಮಗ ನೋಡಿದ್ದ. ಹೀಗಾಗಿ ಆತ ವಿಷಯ ಬಾಯ್ಬಿಟ್ಟರೆ ಸಂಕಷ್ಟ ಎದುರಾಗಬಹುದು ಎಂದು ತಾಯಿಯೇ ಆತನನ್ನು ಉಸಿರುಗಟ್ಟಿಸಿ ಕೊಂದಿದ್ದಾಳೆ ಎಂದು ಪೊಲೀಸ್ ವಿಚಾರಣೆಯಿಂದ ತಿಳಿದು ಬಂದಿದೆ.
ಇನ್ನು ಅಭಿನಂದನ್ ಅವರ ಹೆಸರಿನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯ ಮೇಲೆ ಹರಿಣಿ ಮತ್ತು ವಿನಯ್ ಕಣ್ಣು ಬಿದ್ದಿತ್ತು. ಚಿಕ್ಕಬಾಣಾವರದಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಸೇರಿದಂತೆ ಅಪಾರ ಆಸ್ತಿಯನ್ನು ವಶಪಡಿಸಿಕೊಳ್ಳುವ ದುರಾಸೆಯಿಂದ ಈ ಕೊಲೆ ಮಾಡಿರಬಹುದು. ತಲೆಮರೆಸಿಕೊಂಡಿರುವ ಆರೋಪಿ ವಿನಯ್‍ಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಬೆಂಗಳೂರು ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್ ಡಿ.ಎಲ್ ತಿಳಿಸಿದ್ದಾರೆ.






