Bengaluru | ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಆರೋಪಿಗಳಿಬ್ಬರಿಂದ 9 ಕೋಟಿ ರೂ.ನಗದು ಜಪ್ತಿ

ಸಾಂದರ್ಭಿಕ ಚಿತ್ರ
ಬೆಂಗಳೂರು : ಹೊರರಾಜ್ಯಕ್ಕೆ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ವಶಕ್ಕೆ ಪಡೆದು, ಆರೋಪಿಗಳಿಂದ 9 ಕೋಟಿ ರೂ. ನಗದನ್ನು ಪತ್ತೆ ಹಚ್ಚಿದ್ದಾರೆ. ಇಬ್ಬರು ಆರೋಪಿಗಳು ಹಾಗೂ ಅವರ ಬಳಿಯಿರುವ ನಗದನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ತಮಿಳುನಾಡಿನ ತೂತ್ತುಕುಡಿಯಲ್ಲಿರುವ ಜ್ಯುವೆಲ್ಲರಿ ಅಂಗಡಿಗೆ ಸಂಬಂಧಿಸಿದ ಸಚಿನ್(42) ಹಾಗೂ ಆತನ ಸಹಚರನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಆ.18ರಂದು ರಾತ್ರಿ ನಗರದಿಂದ ತಮಿಳುನಾಡಿನ ಹೊಸೂರು ಕಡೆಗೆ ಹೋಗುತ್ತಿದ್ದ ಹ್ಯುಂಡೈ ಕ್ರೇಟಾ ಕಾರಿನಲ್ಲಿ ದೊಡ್ಡಮಟ್ಟದ ಅಕ್ರಮ ಹಣ ಸಾಗಾಟವಾಗುತ್ತಿರುವ ಬಗ್ಗೆ ಐಟಿ ವಿಭಾಗದ ಉಪ ನಿರ್ದೇಶಕ ಜಗದೀಶ್ ಅವರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು ಕಾರನ್ನು ತಡೆಯುವಂತೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಸೂಚಿಸಿದ್ದರು.
ಅದರಂತೆ, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಪೊಲೀಸರು ಹೊಸೂರು ರಸ್ತೆಯ ಬಿಇಟಿಎಲ್ ಟೋಲ್ ದಾಟಿದ ನಂತರ ಇರುವ ಸಿಗ್ನಲ್ ಬಳಿ ಕಾರು ತಡೆದು ನಿಲ್ಲಿಸಿದ್ದಾರೆ. ಹಾಗೆಯೇ ಅದರಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಹಾಗೂ ಕಾರನ್ನು ಐಟಿ ಅಧಿಕಾರಿಗಳ ತಂಡಕ್ಕೆ ಹಸ್ತಾಂತರಿಸಿದ್ದಾರೆ ಎಂದು ಎಂದು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ.ನಾರಾಯಣ್ ಮಾಹಿತಿ ನೀಡಿದ್ದಾರೆ.
ಆರೋಪಿಗಳಿಬ್ಬರನ್ನೂ ವಿಚಾರಣೆಗೆ ಒಳಪಡಿಸಿದ ಐಟಿ ಅಧಿಕಾರಿಗಳು, ತಕ್ಷಣವೇ ತಮಿಳುನಾಡಿನಲ್ಲಿರುವ ಸಚಿನ್ ನಿವಾಸದ ಮೇಲೂ ದಾಳಿ ನಡೆಸಿ, ಹೆಚ್ಚುವರಿಯಾಗಿ 1.3 ಕೋಟಿ ರೂ. ನಗದು ವಶಕ್ಕೆ ಪಡೆದಿದ್ದಾರೆ. ಒಟ್ಟಾರೆ ಪ್ರಕರಣದಲ್ಲಿ ಐಟಿ ಅಧಿಕಾರಿಗಳು 10.3 ಕೋಟಿಗೂ ಹೆಚ್ಚು ಅಕ್ರಮ ಹಣವನ್ನು ಜಪ್ತಿ ಮಾಡಿದ್ದು, ಹೆಚ್ಚಿನ ತನಿಖೆ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






