Bengaluru | ಕಳವು ಪ್ರಕರಣ; ಹೊರರಾಜ್ಯದ ವ್ಯಕ್ತಿಯ ಬಂಧನ, 4.35 ಕೆಜಿ ಬೆಳ್ಳಿಯ ಗಟ್ಟಿ ಜಪ್ತಿ

ಬೆಂಗಳೂರು : ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿಯೇ ಬೆಳ್ಳಿಯ ಗಟ್ಟಿಯನ್ನು ಕಳವು ಮಾಡಿದ್ದ ಹೊರರಾಜ್ಯದ ಓರ್ವ ವ್ಯಕ್ತಿಯನ್ನು ಸಿಟಿ ಮಾರ್ಕೆಟ್ ಠಾಣಾ ಪೊಲೀಸರು ಬಂಧಿಸಿದ್ದು, 10 ಲಕ್ಷ ರೂ. ಮೌಲ್ಯದ 4.35 ಕೆಜಿ ಬೆಳ್ಳಿಯ ಗಟ್ಟಿ ಜಪ್ತಿ ಮಾಡಿದ್ದಾರೆ.
ಚಿಕ್ಕಪೇಟೆಯಲ್ಲಿರುವ ಚಿನ್ನ-ಬೆಳ್ಳಿಯ ಅಂಗಡಿಯ ಮಾಲಕರು ಕುಟುಂಬ ಸಮೇತರಾಗಿ ಉತ್ತರ ಭಾರತದ ಪ್ರವಾಸಕ್ಕೆ ಹೋಗಿದ್ದು, ಪ್ರವಾಸದಿಂದ ವಾಪಸ್ ಬಂದ ನಂತರ ಅಂಗಡಿಗೆ ಬಂದು ಬೆಳ್ಳಿಯ ಗಟ್ಟಿಗಳನ್ನು ಕಾಣಿಸಲಿಲ್ಲ. ಈ ಬಗ್ಗೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ಆರೋಪಿಯನ್ನು ಮಹಾರಾಷ್ಟ್ರದ ಕಾಲೇವಾಡಿ ಗ್ರಾಮದ ಆತನ ವಾಸದ ಮನೆಯಿಂದ ವಶಕ್ಕೆ ಪಡೆಯಲಾಗಿದೆ. ಬೆಳ್ಳಿಯ ಗಟ್ಟಿಯನ್ನು ಆತನ ಸಹೋದರನಿಗೆ ನೀಡಿದ್ದು, ಬಂಧನ ವಿಷಯ ತಿಳಿದ ನಂತರ ಆತನ ಸಹೋದರ ಬೆಳ್ಳಿಯ ಗಟ್ಟಿಯನ್ನು ಠಾಣೆಗೆ ತಂದು ಒಪ್ಪಿಸಿದ್ದಾನೆ.
ಬಂಧಿತ ಆರೋಪಿಯು ಸುಮಾರು 8 ತಿಂಗಳಿಂದ ಚಿನ್ನ-ಬೆಳ್ಳಿಯ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದನು. ಆತನನ್ನು ವಿಚಾರಣೆಗೊಳಪಡಿಸಿದಾಗ ಈ ಪ್ರಕರಣದಲ್ಲಿ ಬೆಳ್ಳಿಯ ಗಟ್ಟಿಗಳನ್ನು ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.






