Bengaluru | ಸಿಜೆಐ ಉಪಸ್ಥಿತಿಗೆ ವಿರೋಧ; ಎನ್ಎಲ್ಎಸ್ಐಯು ಘಟಿಕೋತ್ಸವ ರದ್ದು

ನ್ಯಾಯಮೂರ್ತಿ ಸೂರ್ಯಕಾಂತ್ | Photo Credit : PTI
ಬೆಂಗಳೂರು : ಘಟಿಕೋತ್ಸವ ಕಾರ್ಯಕ್ರಮಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರ ಉಪಸ್ಥಿತಿಗೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ ಬಳಿಕ, ಬೆಂಗಳೂರಿನ ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಎನ್ಎಲ್ಎಸ್ಐಯು) ಕಾರ್ಯಕ್ರಮವನ್ನೇ ರದ್ದುಗೊಳಿಸಿದೆ.
ಸೆಪ್ಟೆಂಬರ್ 12ರಂದು ಘಟಿಕೋತ್ಸವ ಸಮಾರಂಭ ನಡೆಯಲಿದೆ ಎಂದು ವಿಶ್ವವಿದ್ಯಾನಿಲಯವು ಆಗಸ್ಟ್ 3 ರಂದು ವಿದ್ಯಾರ್ಥಿಗಳಿಗೆ ಕಳುಹಿಸಿದ ಇಮೇಲ್ ನಲ್ಲಿ ತಿಳಿಸಿತ್ತು. ಆದರೆ, ಆಗಸ್ಟ್ 27ರ ಹೊಸ ನೋಟಿಸ್ನಲ್ಲಿ, ಅನಿವಾರ್ಯ ಕಾರಣಗಳಿಂದಾಗಿ ಯಾವುದೇ ಘಟಿಕೋತ್ಸವವನ್ನು ನಡೆಸಲಾಗುವುದಿಲ್ಲ ಎಂದು ಪ್ರಕಟಿಸಿದೆ.
"ನಮ್ಮ ಅತ್ಯುತ್ತಮ ಸಾಮೂಹಿಕ ಪ್ರಯತ್ನಗಳ ಹೊರತಾಗಿಯೂ, ಅನಿವಾರ್ಯ ಕಾರಣಗಳಿಂದಾಗಿ 34ನೇ ವಾರ್ಷಿಕ ಘಟಿಕೋತ್ಸವವನ್ನು ಆಯೋಜಿಸಲು ನಮಗೆ ಸಾಧ್ಯವಾಗುತ್ತಿಲ್ಲ” ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ವಿಶ್ವ ವಿದ್ಯಾನಿಲಯದ ಆಡಳಿತ ಮಂಡಳಿಗಳ ಅನುಮೋದನೆಗೆ ಒಳಪಟ್ಟು 2026ರ ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಗುವುದು ಎಂದು ವಿಶ್ವ ವಿದ್ಯಾನಿಲಯ ತಿಳಿಸಿದೆ.
"ಆಡಳಿತ ಮಂಡಳಿಗಳ ಸೂಕ್ತ ಅನುಮೋದನೆಯ ನಂತರ ಪದವಿ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಪ್ರಮಾಣಪತ್ರಗಳನ್ನು ಕೊರಿಯರ್ ಮೂಲಕ ಪಡೆಯಬಹುದು ಅಥವಾ ವಿಶ್ವವಿದ್ಯಾನಿಲಯದಿಂದ ನೇರವಾಗಿ ಪಡೆದುಕೊಳ್ಳಬಹುದು" ಎಂದು ಅದು ಹೇಳಿದೆ.
ಜೆನ್-ಝೀ ಶೈಲಿಯಲ್ಲಿ ಮಾಡಿ: ಸಿಜೆಪಿ
ಈ ನೋಟಿಸ್ಗೆ ಪ್ರತಿಕ್ರಿಯಿಸಿದ ಕಾಕ್ರೋಚ್ ಜನತಾ ಪಾರ್ಟಿಯ ಸಹಸಂಚಾಲಕ ಸೌರವ್ ದಾಸ್, ಪದವಿ ಪಡೆಯುವ ಬ್ಯಾಚ್ ತನ್ನದೇ ಆದ ಸಮಾರಂಭವನ್ನು ಆಯೋಜಿಸಿ ತನ್ನದೇ ಆದ ವಿಶೇಷ ಅತಿಥಿಯನ್ನು ಆಹ್ವಾನಿಸುತ್ತದೆ ಎಂದು ಆಶಿಸುವುದಾಗಿ ಹೇಳಿದ್ದಾರೆ.
“ಎನ್ಎಲ್ಎಸ್ಯುನ 2026ರ ಪದವಿ ಪಡೆಯುವ ಬ್ಯಾಚ್ ತನ್ನದೇ ಆದ ಪದವಿ ಪ್ರದಾನ ಸಮಾರಂಭವನ್ನು ಆಯೋಜಿಸುತ್ತದೆ ಹಾಗೂ ಅತ್ಯಂತ ಗೌರವಾನ್ವಿತ ಅತಿಥಿಯೊಬ್ಬರನ್ನು ಆಹ್ವಾನಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಇದನ್ನು ಜೆನ್-ಝಿ ಶೈಲಿಯಲ್ಲಿ ಮಾಡಿ!” ಎಂದು ಅವರು ಹೇಳಿದರು.






