ನಾಳೆಯಿಂದ ಶಿವಾಜಿನಗರದ ಸಂತ ಮರಿಯ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ

ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೋ
ಬೆಂಗಳೂರು : ಆರೋಗ್ಯ ಮಾತೆಯ ಪುಣ್ಯಕ್ಷೇತ್ರ ಎಂದೇ ಹೆಸರು ವಾಸಿಯಾಗಿರುವ ಶಿವಾಜಿನಗರದ ಸಂತ ಮರಿಯ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬವನ್ನು ನಾಳೆ(ಆ.29)ಯಿಂದ ಸೆ.8ರ ವರೆಗೆ ಆಚರಿಸಲಾಗುತ್ತದೆ. ಸೆ.8ರಂದು ಮಾತೆ ಮರಿಯಮ್ಮನವರ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೋ ಹೇಳಿದ್ದಾರೆ.
ಶುಕ್ರವಾರ ಪ್ರಕಟನೆ ಹೊರಡಿಸಿರುವ ಅವರು, ಶಿವಾಜಿನಗರದ ಸಂತ ಮರಿಯ ಬಸಿಲಿಕ ಪುಣ್ಯಕ್ಷೇತ್ರವು ನಗರದ ಐತಿಹಾಸಿಕ ಕ್ರೈಸ್ತ ಧಾರ್ಮಿಕ ಪುಣ್ಯ ಕ್ಷೇತ್ರವಾಗಿದ್ದು, ಇದು ಕರ್ನಾಟಕ ಸೇರಿದಂತೆ ದೇಶವಿದೇಶಗಳಿಂದ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಕೇವಲ ಕ್ರೈಸ್ತರು ಮಾತ್ರವಲ್ಲದೆ ವಿವಿಧ ಧರ್ಮ ಹಾಗೂ ಸಮುದಾಯಗಳ ಭಕ್ತಾದಿಗಳು ಇಲ್ಲಿಗೆ ಬಂದು ಪ್ರಾರ್ಥಿಸಿ, ಮೇರಿಮಾತೆಗೆ ತಮ್ಮ ಹರಕೆಯನ್ನು ಅರ್ಪಿಸುತ್ತಾರೆ. ಆ ಮೂಲಕ ದೇವರ ವರದಾನಗಳಿಗೆ ಪಾತ್ರವಾಗುತ್ತಾರೆ ಎಂದಿದ್ದಾರೆ.
ಆ.29ರಿಂದ ಪ್ರತಿದಿನ ಸಂಜೆ 5:30ಕ್ಕೆ ಧ್ವಜಾರೋಹಣ ನೆರವೇರುತ್ತದೆ. ತದನಂತರ ಆಶೀರ್ವಚನ ಹಾಗೂ ಬಲಿಪೂಜಾ ಪ್ರಾರ್ಥನೆಗಳಿರುತ್ತವೆ. ಹಬ್ಬದ ದಿನದಂದು ವಿಶೇಷ ಬಲಿಪೂಜೆಗಳನ್ನು ರಸಲ್ ಮಾರ್ಕೆಟ್ ಚೌಕದಲ್ಲಿ ಕನ್ನಡ, ತಮಿಳು ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಅರ್ಪಿಸಲಾಗುತ್ತದೆ. ಅಂದು ಸಂಜೆ 5:30ಕ್ಕೆ ಮಾತೆ ಮರಿಯಮ್ಮನವರ ಅಲಂಕೃತ ತೇರು ಮೆರವಣಿಗೆ ಇರುತ್ತದೆ ಎಂದು ಅವರು ಹೇಳಿದ್ದಾರೆ.




