Bengaluru | ಕಾಣೆಯಾಗಿದ್ದ ಎರಡು ವರ್ಷದ ಹೆಣ್ಣು ಮಗುವಿನ ರಕ್ಷಣೆ ಮಾಡಿದ ಪೊಲೀಸರು

ಸಾಂದರ್ಭಿಕ ಚಿತ್ರ
ಬೆಂಗಳೂರು : ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ವೃಷಭಾವತಿ ನಗರದಲ್ಲಿ ಕಾಣೆಯಾಗಿದ್ದ ಎರಡು ವರ್ಷದ ಹೆಣ್ಣು ಮಗುವನ್ನು ರಕ್ಷಣೆ ಮಾಡಿದ ಪೊಲೀಸರು, ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ.
ವೃಷಭಾವತಿ ನಗರದ ಹೋಟೆಲ್ವೊಂದರ ಸಮೀಪವಿರುವ ಮನೆಯೊಂದರ ಹೊರಗೆ ಸುಮಾರು ಎರಡು ವರ್ಷದ ಹೆಣ್ಣು ಮಗುವೊಂದು ಒಂಟಿಯಾಗಿತ್ತು. ಅದನ್ನು ಗಮನಿಸಿದ ಸಾರ್ವಜನಿಕರು, ‘ನಮ್ಮ-112’ ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದರು.
ಕೂಡಲೇ ಕಾರ್ಯಪ್ರವೃತ್ತರಾದ ನಮ್ಮ-112 ಸಿಬ್ಬಂದಿಯವರು, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಹೊಯ್ಸಳ-85ರಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ಪ್ರಕಾಶ್.ಜಿ ಹಾಗೂ ಪೊಲೀಸ್ ಕಾನ್ಸ್ ಟೇಬಲ್ ಪ್ರಮೋದ್ ಗೌಡ ರವರಿಗೆ ಮಾಹಿತಿಯನ್ನು ರವಾನಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿ ಸುಮಾರು ಎರಡು ವರ್ಷದ ಹೆಣ್ಣು ಮಗುವನ್ನು ರಕ್ಷಿಸಲಾಯಿತು. ಆಕೆಯ ಪೋಷಕರ ಪತ್ತೆಗಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಿಚಾರಣೆ ನಡೆಸಿ, ಸ್ಥಳೀಯ ಸಾರ್ವಜನಿಕರ ಸಹಕಾರದೊಂದಿಗೆ ಮಗುವಿನ ತಾಯಿಯನ್ನು ಸಂಪರ್ಕಿಸಿ, ಅಗತ್ಯ ಪರಿಶೀಲನೆಯ ನಂತರ ಮಗುವನ್ನು ಸುರಕ್ಷಿತವಾಗಿ ತಾಯಿಯ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.




