Bengaluru | ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ, ರಾಹುಲ್ ಗಾಂಧಿ ಮೇಲೆ ಎಫ್ಐಆರ್ ಖಂಡಿಸಿ ಪ್ರತಿಭಟನೆ

ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಎಫ್ಐಆರ್ ದಾಖಲಿಸಿರುವುದನ್ನು ಖಂಡಿಸಿ, ಕೆಪಿಸಿಸಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎಸ್.ಮನೋಹರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಲ್ದವಾನಿಯಲ್ಲಿ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡುವುದರ ಮೂಲಕ ದೇಶದ ನಾಗರೀಕರನ್ನು ಹಾಗೂ ದಲಿತ ನಾಯಕರನ್ನು ಅವಮಾನಿಸಿರುವುದರ ವಿರುದ್ಧ ಧ್ವನಿ ಎತ್ತಿದ ರಾಹುಲ್ ಗಾಂಧಿ ಅವರ ವಿರುದ್ಧವೇ ಎಪ್ಐಆರ್ ದಾಖಲಿಸುವ ಮೂಲಕ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಕಗ್ಗೊಲೆ ಮಾಡಲು ಕೇಂದ್ರ ಸರಕಾರ ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರನ್ನು ಪ್ರಶ್ನಿಸುವ ಹಕ್ಕು ಸಂವಿಧಾನ ನೀಡಿದೆ. ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡುರುವ ಸಂವಿಧಾನದ ಹಕ್ಕನ್ನು ಬಿಜೆಪಿ ಕಸಿಯುತ್ತಿದೆ. ಭ್ರಷ್ಟ ಹಾಗೂ ಸರ್ವಾಧಿಕಾರಿ ಕೇಂದ್ರ ಸರಕಾರ, ರಾಹುಲ್ ಗಾಂಧಿ ಅವರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಎ.ಆನಂದ್ , ಪ್ರಕಾಶ್, ಪರಿಸರ ರಾಮಕೃಷ್ಣ, ಉಮೇಶ್, ಪುಟ್ಟರಾಜು, ಕುಶಾಲ್ ಗೌಡ, ಸುಂಕದಕಟ್ಟೆ ನವೀನ್, ಮಾಧವ ಹನೂರು, ಸಾಯಿ ನವೀನ್, ಕಿಶೋರ್, ಶಾಹಿನ್ ಶರೀಫ್ ಮತ್ತಿತರರು ಹಾಜರಿದ್ದರು.






