Bengaluru | ಪರಿಷ್ಕೃತ ಕನಿಷ್ಠ ವೇತನಕ್ಕೆ ಆಗ್ರಹಿಸಿ ಧರಣಿ ಸತ್ಯಾಗ್ರಹ

ಬೆಂಗಳೂರು : ಕಾರ್ಮಿಕರ ಸುದೀರ್ಘ ಹೋರಾಟದ ಫಲವಾಗಿ ಹೊರಡಿಸಲಾದ ಪರಿಷ್ಕೃತ ಕನಿಷ್ಠ ವೇತನ ಅಧಿಸೂಚನೆಯನ್ನು ಜಾರಿಗೊಳಿಸದೆ, ಉದ್ಯಮಿಗಳ ಒತ್ತಡಕ್ಕೆ ಮಣಿದು, ಪುನಃ ಪರಿಶೀಲನಾ ಸಮಿತಿ ರಚಿಸಿರುವ ಸರಕಾರದ ಕಾರ್ಮಿಕ ವಿರೋಧಿ ಧೋರಣೆ ಖಂಡಿಸಿ ಮತ್ತು ಕೂಡಲೇ ಅಧಿಸೂಚನೆಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ವತಿಯಿಂದ ಫ್ರೀಡಂ ಪಾರ್ಕ್‍ನಲ್ಲಿ ‘ಅಹೋರಾತ್ರಿ ಧರಣಿ ಸತ್ಯಾಗ್ರಹ’ವನ್ನು ಹಮ್ಮಿಕೊಳ್ಳಲಾಗಿದೆ.
ಬುಧವಾರ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್, ಇಂದಿನ ವಿಪರೀತ ಬೆಲೆ ಏರಿಕೆ, ಹಣದುಬ್ಬರದ ದಿನಗಳಲ್ಲಿ ಸಾಮಾನ್ಯ ಕಾರ್ಮಿಕ ಕುಟುಂಬ ಜೀವನ ನಡೆಸುವುದು ಅತ್ಯಂತ ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ 10 ವರ್ಷಗಳಿಂದ ವಿಳಂಭವಾದ ಈ ಕನಿಷ್ಠ ವೇತನ ಈಗ ಪರಿಷ್ಕೃತವಾಗಿರುವುದು ಅತ್ಯಂತ ನ್ಯಾಯೋಚಿತ. ಅಷ್ಟೇ ಅಲ್ಲ, ವೈಜ್ಞಾನಿಕವಾಗಿದೆ ಎಂದರು.
ಇದನ್ನು ಜಾರಿಗೊಳಿಸಲು ಉದ್ಯಮಪತಿಗಳು ಮೀನಾಮೇಷ ಮಾಡುತ್ತಾರೆ. ಆದರೆ, ಸರಕಾರಕ್ಕೆ ಏನಾಗಿದೆ? ಮಾದರಿ ಮಾಲಕನಾಗಿರಬೇಕಾದ ಸರಕಾರವೇ ಶೋಷಕ ಮಾಲಕನಂತೆ ವರ್ತಿಸುತ್ತಿದೆ. ಉದ್ಯಮಾಪತಿಗಳಿಗೆ ಲಕ್ಷಾಂತರ ಕೋಟಿ ರೂ.ಸಾಲಮನ್ನಾ ಮಾಡಲು ಹಣ ಇದೆ, ಮಂತ್ರಿಗಳು, ಶಾಸಕರು ತಮ್ಮ ಸಂಬಳ ಎರಡರಷ್ಟು ಹೆಚ್ಚಿಸಿಕೊಳ್ಳಲು ದುಡ್ಡಿದೆ. ಆದರೆ ಗುತ್ತಿಗೆ ಕಾರ್ಮಿಕರಿಗೆ ಕೊಡೋದಕ್ಕೆ ದುಡ್ಡಿಲ್ಲ ಎನ್ನುವುದು ಯಾವ ನ್ಯಾಯ? ಎಂದು ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ್ ಯಾದಗಿರಿ, ಹಲವು ದಶಕಗಳಿಂದ ಲಕ್ಷಾಂತರ ಕಾರ್ಮಿಕರು ಗುತ್ತಿಗೆ ಹಾಗೂ ಹೊರಗುತ್ತಿಗೆಯಲ್ಲಿ, ಸರಕಾರಿ ಹಾಗೂ ಖಾಸಗಿ ವಲಯದಲ್ಲಿ ಬಹಳ ಕಿರುಕುಳ ಮತ್ತು ದೌರ್ಜನ್ಯಕ್ಕೆ ತುತ್ತಾಗಿ ಬದುಕುತ್ತಿದ್ದಾರೆ. ಕನಿಷ್ಠ ವೇತನ ಅವರಿಗೆ ಕನಿಷ್ಠ ಆಸರೆಯಾಗಬೇಕಿದೆ. ದೀರ್ಘಕಾಲ ಪುಡಿಗಾಸಿನಲ್ಲಿ, ಅದೂ ಗುತ್ತಿಗೆದಾರರ ಮೋಸ-ವಂಚನೆಗಳ ನಡುವೆ ಈಗ ವೇತನ ಹೆಚ್ಚಿಸಿದ್ದು ಸ್ವಲ್ಪ ಸಮಾಧಾನ ತಂದಿತ್ತು. ಆದರೆ ಈಗ ಅದಕ್ಕೂ ಕುತ್ತು ತಂದಿರುವುದರ ವಿರುದ್ಧ ಬೃಹತ್ ಹೋರಾಟಕ್ಕೆ ಮುಂದಾಗಲು ಈ ಧರಣಿ ನಾಂದಿಯಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಹೋರಾಟಗಾರ ಉಗ್ರ ನರಸಿಂಹೇಗೌಡ, ಎಐಯುಟಿಯುಸಿ ಉಪಾದ್ಯಕ್ಷ ಚಂದ್ರಶೇಖರ ಮೇಟಿ, ಜೆಸಿಟಿಯುನ ಕೆ.ವಿ.ಭಟ್, ಆಶಾ ಯೂನಿಯನ್ ನಾಯಕಿ ನಾಗಲಕ್ಷ್ಮಿ ಮತ್ತು ರಮಾ, ಬಿಸಿಯೂಟ ಕಾರ್ಮಿಕರ ಸಂಘದ ನಾಯಕಿ ಸಂಧ್ಯಾ, ಕಟ್ಟಡ ಕಾರ್ಮಿಕರ ಸಂಘಟನೆಯ ಕಾರ್ಯದರ್ಶಿ ಪಿ.ಎಸ್.ಷಣ್ಮುಗಮ್, ಹೋರಾಟಗಾರರಾದ ಎಂ.ಉಮಾದೇವಿ, ದೇವದಾಸ್, ವೀರೇಶ್ ಎನ್.ಎಸ್, ಮಂಜುನಾಥ್ ಕೈದಾಳ್, ಗಂಗಾಧರ ಬಡಿಗೇರ್ ಡಾ.ಪ್ರಮೋದ್ ಹಾಗೂ ಮಹೇಶ್ ಚಿಕಲಪರ್ವಿ ಸೇರಿದಂತೆ ಹಲವರು ಭಾಗವಹಿಸಿದ್ದರು.
‘ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಲು ಸುಮಾರು 17ಸಾವಿರ ಕೋಟಿ ರೂ.ಹೆಚ್ಚುವರಿ ಹಣದ ಅವಶ್ಯಕತೆ ಇದೆ. ಸಂಪುಟ ಇತ್ತಿಚೆಗೆ ಅಷ್ಟೇ ಅಸ್ತಿತ್ವಕ್ಕೆ ಬಂದಿದೆ. ಜೊತೆಗೆ ಕನಿಷ್ಠ ವೇತನದ ಕುರಿತು ಸಂಪುಟ ಉಪಸಮಿತಿ ರಚನೆಯಾಗಿ ಕೆಲವು ದಿನಗಳಷ್ಟೇ ಆಗಿದೆ. ಆ ಸಮಿತಿ ಇನ್ನೂ ಸಭೆಯನ್ನು ನಡೆಸಿಲ್ಲ. ಆದರೂ ಸರಕಾರವು ಕಾರ್ಮಿಕರ ಪರವಾಗಿದೆ. ಹಾಗಾಗಿ ಈ ವಿಷಯವನ್ನು ಚರ್ಚಿಸಿ ನಿರ್ಧರಿಸಲು ಸಮಯ ಬೇಕಾಗುತ್ತದೆ. ನಿಮ್ಮ ಮನವಿಯನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು’.
-ಪಿ.ಎಂ.ನರೇಂದ್ರಸ್ವಾಮಿ, ಕೃಷಿ ಸಚಿವ






