Bengaluru | ‘ಕೋಳಿ ತ್ಯಾಜ್ಯಕ್ಕೆ ಸಂಗ್ರಹ ಶುಲ್ಕ’ ವಿರೋಧಿಸಿ ವ್ಯಾಪಾರಿಗಳಿಂದ ಮುಷ್ಕರ

ಬೆಂಗಳೂರು : ಕೋಳಿ-ತ್ಯಾಜ್ಯ ಸಂಗ್ರಹಕ್ಕೆ ಹೊಸದಾಗಿ ಶುಲ್ಕ ವಿಧಿಸಿರುವುದನ್ನು ವಿರೋಧಿಸಿ ‘ಕರ್ನಾಟಕ ಕೋಳಿ ವ್ಯಾಪಾರಿಗಳ ಸಂಘ’ದ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ಗುರುವಾರ ಕೋಳಿ ಸಾಕಣೆ ಕೇಂದ್ರಗಳು ಮತ್ತು ಕೋಳಿ ಮಾಂಸದ ಅಂಗಡಿಗಳನ್ನು ಮುಚ್ಚಿ ಮುಷ್ಕರ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ (ಕೆಪಿಟಿಎ) ಅಧ್ಯಕ್ಷ ಕೆ.ಎನ್. ನಾಗರಾಜ್, ಹೊಸ ವ್ಯವಸ್ಥೆಯ ಪ್ರಕಾರ ಕೋಳಿ ಮಾರಾಟ ಮಳಿಗೆಗಳು ತ್ಯಾಜ್ಯ ಸಂಗ್ರಹಕ್ಕಾಗಿ ಪ್ರತಿ ಕೆಜಿಗೆ 5 ರೂ ಪಾವತಿಸಬೇಕಾಗುತ್ತದೆ. ಬೆಂಗಳೂರಿನ ಸುಮಾರು 6 ಸಾವಿರ ಅಂಗಡಿಗಳ ಮೇಲೆ ಇದು ಭಾರಿ ಹೊರೆಯಾಗಲಿದೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಮೂಲಕ ನೀಡಲಾದ ಟೆಂಡರ್ ರದ್ದುಗೊಳಿಸುವಂತೆ ಮತ್ತು ಅಕ್ರಮಗಳ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಕೋಳಿ ಸಾಕಣೆ ಉದ್ಯಮವು ಸಗಟು, ಚಿಲ್ಲರೆ ವ್ಯಾಪಾರ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ಲಕ್ಷಾಂತರ ಜನರನ್ನು ನೇಮಿಸಿಕೊಂಡಿದೆ. ಈ ಮೂಲಕ ಸರಕಾರ ಸಾಕಷ್ಟ ತೆರಿಗೆಗಳನ್ನು ಕಟ್ಟುತ್ತಿದ್ದು, ಸರಕಾರದ ಬೊಕ್ಕಸಕ್ಕೆ ಗಣನೀಯ ಆದಾಯವನ್ನು ತಂದು ಕೊಡುತ್ತಿದೆ. ನಾವು ಸರಕಾರಿ ಅನುದಾನ ಅಥವಾ ಖಾತರಿಗಳನ್ನು ಪಡೆಯದೆಯೇ ಈ ಉದ್ಯಮವನ್ನು ನಿರ್ಮಿಸಿ ಉಳಿಸಿಕೊಂಡಿದ್ದೇವೆ. ವ್ಯಾಪಾರಿಗಳೊಂದಿಗೆ ಸಮಾಲೋಚಿಸದೇ ಅಥವಾ ಅದರ ಪರಿಣಾಮವನ್ನು ಪರಿಶೀಲಿಸದೇ ಇದ್ದಕ್ಕಿದ್ದಂತೆ ತ್ಯಾಜ್ಯ ಸಂಗ್ರಹಕ್ಕಾಗಿ ಕೆಜಿಗೆ 5 ರೂ. ಶುಲ್ಕ ವಿಧಿಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೋಳಿ ಮಾಂಸವು ಅಂದಾಜು ಶೇ.75ರಷ್ಟು ಜನಸಂಖ್ಯೆಗೆ ಪ್ರೋ ಟೀನ್ ಒದಗಿಸುವ ಪ್ರಮುಖ ಮೂಲವಾಗಿದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಕೋಳಿ ಮಾಂಸದಿಂದ ಸಿಗುವ ಪೌಷ್ಟಿಕಾಂಶದ ಮಹತ್ವ ವ್ಯಾಪಕವಾಗಿ ಗಮನಕ್ಕೆ ಬಂದಿತ್ತು. ಸಂಗ್ರಹಣಾ ಶುಲ್ಕ ವಿಧಿಸುವ ಬದಲು, ಸರಕಾರ ಕೋಳಿ ಉಪಉತ್ಪನ್ನಗಳ ವಾಣಿಜ್ಯ ಮೌಲ್ಯವನ್ನು ಗುರುತಿಸಬೇಕು ಮತ್ತು ಅವುಗಳಿಗೆ ಬೆಂಬಲ ಬೆಲೆಯನ್ನು ನೀಡುವ ಕುರಿತು ಆಲೋಚಿಸಬೇಕು ಎಂದು ನಾಗರಾಜ್ ತಿಳಿಸಿದರು.
ಅಸೋಸಿಯೇಷನ್ ಸದಸ್ಯ ಮುಹಮ್ಮದ್ ಖಮರುದ್ದೀನ್ ಮಾತನಾಡಿ, ಟೆಂಡರ್ ಹಿಂದೆ ಮೂರನೇ ವ್ಯಕ್ತಿಗಳ ಜಾಲವಿದ್ದು, ನಾಗರಿಕ ಸಂಸ್ಥೆಗಳನ್ನು ಬಳಸಿಕೊಂಡು ವ್ಯಾಪಾರಿಗಳಿಗೆ ಕ್ಯೂಆರ್‍ಕೋಡ್ ಸ್ಕ್ಯಾನರ್‍ಗಳ ಮೂಲಕ ಪಾವತಿಸುವಂತೆ ಒತ್ತಾಯಿಸುತ್ತಿದೆ. ಈ ಟೆಂಡರ್ ಸಂಪೂರ್ಣವಾಗಿ ರದ್ದುಗೊಳಿಸಬೇಕು, ಅದರಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನೂ ತನಿಖೆಗೆ ಒಳಪಡಿಸಬೇಕು. ಈ ಟೆಂಡರ್ ಒಂದು ಹಗರಣವಾಗಿದ್ದು, ನ್ಯಾಯಯುತ ತನಿಖೆಯಿಂದ ವ್ಯವಸ್ಥೆಯನ್ನು ಯಾರು ವಿನ್ಯಾಸಗೊಳಿಸಿದರು ಮತ್ತು ಅದರಿಂದ ಯಾರು ಪ್ರಯೋಜನ ಪಡೆಯುತ್ತಿದ್ದಾರೆಂದು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.






