Bengaluru | ಮಹಿಳೆಯ ಅಪಹರಣ: ಮೂವರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು : ಮಹಿಳೆಯೊಬ್ಬರನ್ನು ಅಪಹರಿಸಿ ಹಲ್ಲೆ ಮಾಡಿದಲ್ಲದೆ, ಆಕೆಯ ವಿಡಿಯೋವನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿ ಮೂವರು ಆರೋಪಿಗಳನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ. ರೇಷ್ಮಾ ಬಾನು, ನಝತ್ ಮತ್ತು ಸುಹೇಲ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.
ಸುಮಾರು ಎರಡು ವರ್ಷಗಳ ಹಿಂದೆ ಆರೋಪಿ ರೇಷ್ಮಾ ಬಳಿ ಸಂತ್ರಸ್ತ ಮಹಿಳೆಯು ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದರು. ರೇಷ್ಮಾ ಮೂಲಕ ನಝತ್ ಎಂಬಾಕೆಯ ಪರಿಚಯವೂ ಸಂತ್ರಸ್ತೆಗೆ ಆಗಿತ್ತು. ಬಳಿಕ ನಝತ್ ಬಳಿಯೂ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು ಎಂದು ಎನ್ನಲಾಗಿದೆ.
ನಝತ್ಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿಯಂತೆ ಕಂತಿನಲ್ಲಿ ಹಣ ಪಾವತಿಸುತ್ತಿದ್ದ ಮಹಿಳೆ, ವೈಯಕ್ತಿಕ ಕಾರಣಗಳಿಂದ ಕಳೆದ ಆರು ತಿಂಗಳಿಂದ ಹಣ ಪಾವತಿಸಲು ಸಾಧ್ಯವಾಗಿರಲಿಲ್ಲ. ಈ ವಿಚಾರವಾಗಿ ಪದೇಪದೇ ಸಂಪರ್ಕಿಸುತ್ತಿದ್ದ ನಝತ್ನ ಸಂಖ್ಯೆಯನ್ನು ಮಹಿಳೆ ನಿರ್ಬಂಧಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಮನೆ ಖಾಲಿ ಮಾಡಿಕೊಂಡು ತಾಯಿಯ ಮನೆಗೆ ತೆರಳಿದ್ದ ಸಂದರ್ಭದಲ್ಲಿ, ಕೆಲಸವೊಂದಿದೆ ಹಾಗೂ ಹಣ ಸಿಗಲಿದೆ ಎಂದು ಹೇಳಿ ನಝತ್ ತಮ್ಮ ಮನೆಗೆ ಕರೆಸಿಕೊಂಡಿದ್ದರು. ಅಲ್ಲಿಗೆ ಸಂತ್ರಸ್ತೆ ತೆರಳಿದ ಬಳಿಕ ಆಕೆಯ ಮೇಲೆ ಹಲ್ಲೆ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ವೇಳೆ ರೇಷ್ಮಾ ಬಾನು ಹಾಗೂ ಆಕೆಯ ಪತಿ ಸುಹೇಲ್ ಅಲ್ಲಿಗೆ ಬಂದಿದ್ದು, ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಚಾಕುವಿನಿಂದ ಹಲ್ಲೆ ನಡೆಸಿ ಬಳಿಕ ಆಟೋದಲ್ಲಿ ಮಹಿಳೆಯನ್ನು ಕರೆದೊಯ್ದು ಕುಂಬಳಗೋಡು ಸಮೀಪದ ಮನೆಯೊಂದರಲ್ಲಿ ಇರಿಸಲಾಗಿತ್ತು. ಅಲ್ಲದೆ ಆಕೆಯನ್ನು ಅವಮಾನಿಸಿದ ವಿಡಿಯೋವನ್ನು ಹರಿಬಿಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.






