Bengaluru | ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಟಿಎಂಸಿ ಮುಖಂಡನ ಬಂಧನ

ಬೆಂಗಳೂರು : ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ಮುಖಂಡ ಸೋಮನಾಥ್ ಡೇ ಅವರನ್ನು ಪಶ್ಚಿಮ ಬಂಗಾಳದ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
2024ರಲ್ಲಿ ಕೋಲ್ಕತ್ತಾದ ಆರ್‌ಜಿಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ನಡೆದಿದೆ. ಈ ಪ್ರಕರಣದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲು ಅವಕಾಶ ಸಿಗಬಾರದು ಎಂಬ ಉದ್ದೇಶದಿಂದ ಸೋಮನಾಥ್ ಡೇ ಅವರು ಸಾಕ್ಷ್ಯ ನಾಶಪಡಿಸಿದ್ದಾರೆ. ಅಲ್ಲದೆ ನಿಯಮಗಳನ್ನು ಮೀರಿ ತರಾತುರಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಿದ ಸಂಚಿನಲ್ಲಿ ಸೋಮನಾಥ್ ಡೇ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಈ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಆರೋಪಿ ಸೋಮನಾಥ್ ಡೇ ಮೊದಲು ಹೈದರಾಬಾದ್‍ಗೆ ಓಡಿಹೋಗಿದ್ದರು. ಪೊಲೀಸರು ಬೆನ್ನಟ್ಟುತ್ತಿದ್ದಂತೆ ಅಲ್ಲಿಂದ ಬೆಂಗಳೂರಿಗೆ ಬಂದು ತಲೆಮರೆಸಿಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಪಶ್ಚಿಮ ಬಂಗಾಳದ ಖಾರ್ಡಾ ಪೊಲೀಸ್ ತಂಡ ಬೆಂಗಳೂರಿಗೆ ಆಗಮಿಸಿ ಬುಧವಾರ ತಡರಾತ್ರಿ ವಶಕ್ಕೆ ಪಡೆದಿದೆ ಎಂದು ತಿಳಿದು ಬಂದಿದೆ.
.




