Bengaluru | ಸಂಶೋಧನೆ ನೆಪದಲ್ಲಿ ಬೀದಿ ನಾಯಿಗಳಿಗೆ ಶಸ್ತ್ರಚಿಕಿತ್ಸೆ; ಇಬ್ಬರು ಪಶುವೈದ್ಯರ ವಿರುದ್ಧ ಎಫ್‍ಐಆರ್ ದಾಖಲು

ಬೆಂಗಳೂರು : ಸಂಶೋಧನೆ ನೆಪದಲ್ಲಿ ಬೀದಿ ನಾಯಿಗಳನ್ನು ಕರೆತಂದು ಅರವಳಿಕೆ ನೀಡದೇ ಶಸ್ತ್ರಚಿಕಿತ್ಸೆ ನಡೆಸಿ ಕ್ರೌರ್ಯವೆಸಗುತ್ತಿದ್ದ ಆರೋಪದಡಿ ಖಾಸಗಿ ಆಸ್ಪತ್ರೆಯ ಇಬ್ಬರು ಪಶುವೈದ್ಯರ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. 12 ನಾಯಿಗಳು ಹಾಗೂ ಒಂದು ಬೆಕ್ಕು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವುಗಳನ್ನು ರಕ್ಷಿಸಲಾಗಿದೆ.
ಜಿಬಿಎ ಪೂರ್ವ ವಲಯದ ಪಶುಪಾಲನಾ ಸಹಾಯಕ ನಿರ್ದೇಶಕ ಡಾ.ರುದ್ರೇಶ್ ಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಡಾ.ಮಂಜುನಾಥ್ ಬಿ.ಎಂ. ಹಾಗೂ ಡಾ.ಆಸಿಫ್ ಪಾಷಾ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಳ್ಳಂದೂರಿನ ದೊಡ್ಡಕನ್ನಹಳ್ಳಿಯ ಪ್ರೇಮ್ ಕೇರ್ ಪಶುವೈದ್ಯ ಆಸ್ಪತ್ರೆ ಹೆಸರಿನಲ್ಲಿ ಚಿಕಿತ್ಸೆ ನೆಪದಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಜಿಬಿಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮಂಜುನಾಥ್ ಮತ್ತು ಆಸಿಫ್ ಪಾಷಾ ಅವರು ಬೀದಿ ನಾಯಿಗಳನ್ನು ಆಸ್ಪತ್ರೆಗೆ ತರುತ್ತಿದ್ದರು. ಶ್ವಾನಗಳ ಕಾಲುಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಅರವಳಿಕೆ ನೀಡದೇ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಪ್ರಾಣಿಗಳ ಮೇಲೆ ಕ್ರೌರ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.






