Bengaluru | ಸಚಿವ ಕೃಷ್ಣಬೈರೇಗೌಡ ಕ್ಷಮೆ ಕೇಳುವಂತೆ ಆಗ್ರಹಿಸಿ ಪೌರಕಾರ್ಮಿಕರಿಂದ ಧರಣಿ

ಬೆಂಗಳೂರು : ಪೌರಕಾರ್ಮಿಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಕೂಡಲೇ ಕ್ಷಮೆ ಕೇಳುವಂತೆ ಆಗ್ರಹಿಸಿ, ಎಐಸಿಸಿಟಿಯು ನೇತೃತ್ವದಲ್ಲಿ ಗುರುವಾರ ನಗರದ ಜಿಬಿಎ ಕೇಂದ್ರ ಕಚೇರಿ ಆವರಣದಲ್ಲಿರುವ ಐಪಿಡಿ ಸಾಲಪ್ಪ ಪ್ರತಿಮೆಯ ಬಳಿ ಪೌರಕಾರ್ಮಿಕರು ಧರಣಿ ನಡೆಸಿದ್ದಾರೆ.
ಸಚಿವ ಕೃಷ್ಣ ಬೈರೇಗೌಡ ಅವರು ಸರಿಯಾದ ಮಾಹಿತಿ ಪಡೆಯದೇ ಮಾತನಾಡಿದ್ದಾರೆ. ಕರ್ತವ್ಯಕ್ಕೆ ಯಾರು ಗೈರಾಗಿದ್ದಾರೆ ಮತ್ತು ಯಾವ ಕಾರಣಕ್ಕಾಗಿ ಗೈರಾಗಿದ್ದಾರೆ ಎಂಬುದನ್ನು ಮೊದಲು ಪರಿಶೀಲಿಸಬೇಕಿತ್ತು. ಸಮರ್ಪಕ ಕಾರಣ ನೀಡದೇ ಕರ್ತವ್ಯಕ್ಕೆ ಹಾಜರಾಗದವರನ್ನು ಕೆಲಸದಿಂದ ವಜಾಗೊಳಿಸುವುದಕ್ಕೆ ನಮ್ಮ ತಕರಾರಿಲ್ಲ, ಆದರೆ ನೈಜ ಪರಿಸ್ಥಿತಿಯನ್ನು ಅರಿಯದೇ ಎಲ್ಲರ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ನಿರಂತರವಾಗಿ ಶೋಷಣೆ ಆಗುತ್ತಿದ್ದು, ಇದರ ಬಗ್ಗೆ ಸಚಿವರಿಗೆ ಮಾಹಿತಿಯಿಲ್ಲ. ಸರಿಯಾದ ಸಮಯಕ್ಕೆ ವೇತನ ನೀಡುತ್ತಿಲ್ಲ. ವಾರದ ರಜೆಯನ್ನೂ ಒದಗಿಸುತ್ತಿಲ್ಲ ಹಾಗೂ ನಿಷ್ಠೆಯಿಂದ ದುಡಿಯುತ್ತಿರುವ ಎಷ್ಟೋ ಕಾರ್ಮಿಕರನ್ನು ಇಂದಿಗೂ ಖಾಯಂ ಮಾಡಿಲ್ಲ ಎಂದು ಕಾರ್ಮಿಕರು ತಮ್ಮ ಅಳಲು ತೋಡಿಕೊಂಡರು.
ಕೂಡಲೇ ಸಚಿವ ಕೃಷ್ಣ ಬೈರೇಗೌಡ ಅವರು ಎಲ್ಲಾ ಪೌರಕಾರ್ಮಿಕರಿಗೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರು ಪೌರಕಾರ್ಮಿಕರನ್ನು ತಕ್ಷಣವೇ ಖಾಯಂಗೊಳಿಸಬೇಕು. ಎಲ್ಲಾ ಪೌರಕಾರ್ಮಿಕರಿಗೆ ನ್ಯಾಯಯುತ ಮತ್ತು ಗೌರವಯುತ ಕೆಲಸದ ವಾತಾವರಣವನ್ನು ಖಾತರಿಪಡಿಸಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಬಿಬಿಎಂಪಿ ಪೌರಕಾರ್ಮಿಕರ ಸಂಘದ ಅಧ್ಯಕ್ಷೆ ನಿರ್ಮಲ, ಮಣಿಯಮ್ಮ, ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಾಬು, ಎಐಸಿಸಿಟಿಯು ರಾಜ್ಯ ಪ್ರದಾನ ಕಾರ್ಯದರ್ಶಿ ಮೈತ್ರೆಯಿ, ವಕೀಲ ವಿನಯ್ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ಪ್ರಮುಖ ಬೇಡಿಕೆಗಳು: ತೆರವುಗೊಳಿಸಲಾದ ಎಲ್ಲ ಬೀದಿ ವ್ಯಾಪಾರಿಗಳಿಗೆ ಅವರು ಹಿಂದೆ ವ್ಯಾಪಾರ ಮಾಡುತ್ತಿದ್ದ ಸ್ಥಳಗಳಲ್ಲೇ ತಕ್ಷಣ ಮತ್ತೆ ವ್ಯಾಪಾರ ಮಾಡಲು ಅವಕಾಶ ನೀಡಬೇಕು. ಎಲ್ಲ ಬೀದಿ ವ್ಯಾಪಾರಿಗಳನ್ನು ಒಳಗೊಂಡಂತೆ ಸಂಪೂರ್ಣ ಸಮೀಕ್ಷೆ ನಡೆಸಬೇಕು’ ಎಂದು ಬೀದಿ ವ್ಯಾಪಾರಿಗಳು ಹಾಗೂ ಪೌರಕಾರ್ಮಿಕರು ಆಗ್ರಹಿಸಿದ್ದಾರೆ.






