Bengaluru | ಮದುವೆಯಾಗುವುದಾಗಿ ನಂಬಿಸಿ ವಂಚನೆ: ಮಹಿಳೆಯ ವಿರುದ್ಧ ಎಫ್‍ಐಆರ್ ದಾಖಲು

ಬೆಂಗಳೂರು : ಮಹಿಳೆಯೊಬ್ಬರು ಟ್ಯಾಟೂ ಆರ್ಟಿಸ್ಟ್ ನನ್ನು ಮದುವೆಯಾಗುವುದಾಗಿ ನಂಬಿಸಿ, ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಮಹಿಳೆಯ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಎರಡು ವರ್ಷಗಳ ಹಿಂದೆ ಟ್ಯಾಟೂ ಸ್ಟುಡಿಯೋದಲ್ಲಿ ಪರಿಚಯವಾಗಿದ್ದ ಸಂಪ್ರಿತಾ ಎಂಬ ಮಹಿಳೆಯು ಟ್ಯಾಟೂ ಆರ್ಟಿಸ್ಟ್ ಹಾಗೂ ನಟ ಅರ್ಜುನ್ ಅವರಿಗೆ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ. ಅಲ್ಲದೆ ಈಗಾಗಲೇ ಸಂಪ್ರಿತಾ ಅವರಿಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಅರ್ಜುನ್ ಅವರಿಗೂ ಮೊದಲ ಪತ್ನಿಯೊಂದಿಗೆ ವಿಚ್ಛೇದನವಾಗಿತ್ತು. ಸಂಪ್ರಿತಾ ಹಾಗೂ ಅರ್ಜುನ್ ಪರಿಚಯ ಇಬ್ಬರ ನಡುವೆ ಪ್ರೀತಿಗೆ ತಿರುಗಿತ್ತು. ನಂತರ ಇಬ್ಬರು ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಅರ್ಜುನ್ ಅವರು ಮಹಿಳೆಯನ್ನು ನಂಬಿ ಹಲವು ಬಾರಿ ಹಣ ಕೊಟ್ಟಿದ್ದರು. ಸೆ.2ರಂದು ಸಂಪ್ರಿತಾಗೆ ಕರೆ ಮಾಡಿದ್ದಾಗ, ಅವರು ಕರೆ ಸ್ವೀಕರಿಸದ ಹಿನ್ನಲೆ ಮನೆ ಬಳಿ ತೆರಳಿದ್ದರು. ಈ ವೇಳೆ ಮಹಿಳೆಯು ಪರಪುರುಷನ ಜೊತೆ ಮಾತನಾಡುತ್ತಿದ್ದರು ಎನ್ನಲಾಗಿದೆ. ಇದನ್ನು ಅರ್ಜುನ್ ಪ್ರಶ್ನೆ ಮಾಡಿದಾಗ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಕಬ್ಬಿಣದ ರಾಡಿನಿಂದ ಅರ್ಜುನ್‍ಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಈ ಸಂಬಂಧ ಅರ್ಜುನ್ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.






