Bengaluru | ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಆಗ್ರಹಿಸಿ ಪರಿಸರ ಸತ್ಯಾಗ್ರಹ

ಸಾಂದರ್ಭಿಕ ಚಿತ್ರ
ಬೆಂಗಳೂರು : ಪಶ್ಚಿಮ ಘಟ್ಟಗಳ ಸಂರಕ್ಷಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ನಗರದ ಫ್ರೀಡಂ ಪಾರ್ಕ್ನಲ್ಲಿ ರವಿವಾರ ಮೂರು ದಿನಗಳ ಪರಿಸರ ಸತ್ಯಾಗ್ರಹ ಪ್ರಾರಂಭಿಸಲಾಗಿದೆ.
ದಟ್ಟವಾದ ಕಾಡನ್ನು ಒಳಗೊಂಡಿರುವ ಪಶ್ಚಿಮ ಘಟ್ಟಗಳು ಜೀವಸಂಕುಲದ ಉಸಿರು. ಇದು ನಾಶವಾದರೆ ಮಾನವ ಪ್ರಭೇದವೂ ಸೇರಿದಂತೆ ಸಕಲ ಜೀವರಾಶಿಗಳು, ನದಿ, ಬೆಟ್ಟಗುಡ್ಡಗಳು ನಾಶವಾಗುತ್ತದೆ. ಹಾಗಾಗಿ ಅಲ್ಲಿಯ ಪರಿಸರವನ್ನು ಹಾನಿಪಡಿಸುವ ಯಾವುದೇ ಯೋಜನೆಗಳನ್ನು ಕೈಗೊಳ್ಳಬಾರದು ಎಂದು ಸತ್ಯಾಗ್ರಹ ನಿರತರು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಕೃಷಿಕ ಅವಿನಾಶ್ ಟಿ.ಜಿ.ಎಸ್, ಕರ್ನಾಟಕ ರಾಜ್ಯದಲ್ಲಿ ಸುಮಾರು 2.5 ಲಕ್ಷ ಹೆಕ್ಟೇರ್ಗೂ ಅಧಿಕ ಜಾಗದಲ್ಲಿ ಸಣ್ಣ ಸಣ್ಣ ಕಾಡುಗಳು, ಕುರುಚಲು ಕಾಡುಗಳು, ಗೋಮಾಳಗಳು, ಬೆಡ್ಡಗುಡ್ಡಗಳಲ್ಲಿನ ಕಾಡುಗಳು ಪರಿಸರ-ಪ್ರಕೃತಿಯನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿವೆ. ಇಂತಹ ಜಾಗವನ್ನು ಸಂರಕ್ಷಿಸಬೇಕು ಮತ್ತು ಅಲ್ಲಿ ಯಾವುದೇ ಪರಿಸರ ಹಾನಿಕಾರಕ ಯೋಜನೆಗಳು ಜಾರಿಗೊಳ್ಳದ ಹಾಗೇ ಕಾನೂನನ್ನು ಗಟ್ಟಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯದಲ್ಲಿ ಹರಿಯುತ್ತಿರುವ ನದಿಮೂಲ ಬರಿದಾಗದಂತೆ ಹಾಗೂ ಅದು ಕಲುಶಿತವಾಗದಂತೆ ನೋಡಿಕೊಳ್ಳಬೇಕು. ಮತ್ತು ನದಿ ಪಾತ್ರಗಳಲ್ಲಿ ಒತ್ತುವರಿಯಾಗಿರುವ ಭೂಮಿಯನ್ನು ತೆರವುಗೊಳಿಸಬೇಕು. ನದಿ ವಲಯ ಒತ್ತುವರಿಯನ್ನು ಕೊಲೆಯತ್ನ ಪ್ರಕರಣದಂತೆ ಪರಿಗಣಿಸಿ ಶಿಕ್ಷಾರ್ಹ ಅಪರಾಧವಾಗಿಸಬೇಕು. ಇದು ನದಿ ಜೀವದ ಉಳಿವಿಗಾಗಿ ಮಾತ್ರವಲ್ಲ. ಜೀವಸಂಕುಲದ ಉಳಿವಿಗೇ ಅನಿವಾರ್ಯವಾಗಿದೆ ಎಂದರು.
ಕರ್ನಾಟಕ ಸಾರ್ವಜನಿಕ ಜಮೀನು ನಿಗಮವು 2021ರಲ್ಲಿ ಪ್ರಕಟಿಸಿದ ಮಾಹಿತಿಯಂತೆ ರಾಜ್ಯದಲ್ಲಿ 40,483 ಕೆರೆಗಳಿವೆ. ಈ ಕೆರೆಕಟ್ಟೆಗಳನ್ನು ಪುನಶ್ಚೇತನಗೊಳಿಸಿ ಸಂರಕ್ಷಿಸಬೇಕು. ಹಾಗೂ ಮುಂದೆಂದೂ ಒತ್ತುವರಿ ಆಗದಿರುವಂತೆ ಕಟ್ಟುನಿಟ್ಟಾದ ಕಾನೂನನ್ನು ರೂಪಿಸಬೇಕು. ಇದರಿಂದ ಅಂತರ್ಜಲ ಮಟ್ಟದ ವೃದ್ಧಿಗೆ ಸಹಕಾರಿ ಆಗುತ್ತದೆ ಎಂದು ಆಗ್ರಹಿಸಿದರು.
ಸತ್ಯಾಗ್ರಹದಲ್ಲಿ ರೈತ ಹೋರಾಟಗಾರರಾದ ಚಾಮರಸ ಮಾಲಿ ಪಾಟೀಲ್, ವೀರಸಂಗಯ್ಯ, ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳ್ಳಿ, ಪರಿಸರ ಹೋರಾಟಗಾರ್ತಿ ವಿ.ಗಾಯತ್ರಿ ಮತ್ತಿತರರು ಹಾಜರಿದ್ದರು.
ಹಕ್ಕೊತ್ತಾಯಗಳು: ರಾಸಾಯನಿಕ ಮುಕ್ತ ಕೃಷಿ ಪದ್ಧತಿಗಾಗಿ ಪ್ರತ್ಯೇಕ ವಿಶ್ವ ವಿದ್ಯಾನಿಲಯವನ್ನು ಸ್ಥಾಪಿಸಬೇಕು. ರಾಸಾಯನಿಕ ಮುಕ್ತ ಕೃಷಿ ಪದ್ಧತಿಯನ್ನು ಎಲ್ಲ ರೈತರಿಗೆ ಅಳವಡಿಸಿಕೊಳ್ಳಲು ಸಹಕಾರಿಯಾಗುವಂತಹ ಕಾರ್ಯಯೋಜನೆಗಳನ್ನು ಜಾರಿಗೊಳಿಸಬೇಕು. ಹವಾಮಾನ ಬದಲಾವಣೆಯ ರಾಷ್ಟ್ರೀಯ ಯೋಜನೆ ಹಾಗೂ ಕರ್ನಾಟಕ ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆಯ ಬಗ್ಗೆ ಜನಸಾಮಾನ್ಯರಿಗೆ ತಿಳಿಸಬೇಕು. ಹಾಗೂ ಈ ಯೋಜನೆಗಳಲ್ಲಿ ಉಲ್ಲೇಖಿಸಿರುವ ಎಲ್ಲಾ ಕೆಲಸಕಾರ್ಯಗಳನ್ನು ಮುಂದಿನ 10 ವರ್ಷಗಳಲ್ಲಿ ಕಡ್ಡಾಯವಾಗಿ ಪೂರೈಸಬೇಕು. ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆಯು ಸ್ಥಳೀಯಕರಣಗೊಳಿಸಬೇಕು. ವಿಪತ್ತು ನಿರ್ವಹಣೆ ಪಂಚಾಯತ್ ಮಟ್ಟದಿಂದ ಆಗಬೇಕು. ಇದಕ್ಕಾಗಿ 5ನೇ ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳನ್ನು ಅನುಷ್ಠಾನ ಮಾಡಬೇಕು ಎಂದು ಪರಿಸರ ಸತ್ಯಾಗ್ರಹದಲ್ಲಿ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.






