Bengaluru | ಅಕ್ರಮವಾಗಿ ಸಂಗ್ರಹಿಸಿದ್ದ 55 ಸಿಲಿಂಡರ್ ಗಳ ಜಪ್ತಿ, ಪ್ರಕರಣ ದಾಖಲು

ಬೆಂಗಳೂರು : ಅಕ್ರಮವಾಗಿ ಗ್ಯಾಸ್ ಸಿಲಿಂಡರ್‍ಗಳನ್ನು ಸಂಗ್ರಹಿಸಿ ರೀಫಿಲ್ಲಿಂಗ್ ಮಾಡುತ್ತಿದ್ದ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡ ವಿವೇಕನಗರ ಠಾಣಾ ಪೊಲೀಸರು, ಆರೋಪಿಯಿಂದ 1.2 ಲಕ್ಷ ರೂ.ಗಳ 55 ಗ್ಯಾಸ್ ಸಿಲಿಂಡರ್‍ಗಳನ್ನು ಹಾಗೂ ರೀಫಿಲ್ಲಿಂಗ್ ಮಾಡಲು ಬಳಸುತ್ತಿದ್ದ ವಸ್ತುವನ್ನು ಜಪ್ತಿ ಮಾಡಿದ್ದಾರೆ.
ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಗ್ಯಾಸ್ ಸಿಲಿಂಡರ್‍ಗಳನ್ನು ಅಕ್ರಮವಾಗಿ ಸಂಗ್ರಹಿಸಿಕೊಂಡು, ಗ್ಯಾಸ್ ಸಿಲಿಂಡರ್‍ಗಳಿಗೆ ರೀ ಫಿಲ್ಲಿಂಗ್ ಮಾಡುತ್ತಿರುವ ಬಗ್ಗೆ ವಿವೇಕನಗರ ಪೊಲೀಸ್ ಇನ್ಸ್ ಪೆಕ್ಟರ್ ರವರಿಗೆ ಖಚಿತ ಮಾಹಿತಿಯೊಂದು ಬಂದಿತ್ತು. ಈ ಮಾಹಿತಿಯ ಆಧಾರದ ಮೇಲೆ, ವಿವೇಕನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವರ ಸೂಚನೆಯಂತೆ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿಯವರು ಹಾಗೂ ಆಹಾರ ನಿರೀಕ್ಷಕರು, ಪೂರ್ವ ವಲಯ ಬೆಂಗಳೂರು ನಗರ ರವರೊಂದಿಗೆ ಜಂಟಿಯಾಗಿ ಕಾರ್ಯಚರಣೆಯನ್ನು ನೆಡೆಸಿ ಅಕ್ರಮವಾಗಿ ಗ್ಯಾಸ್ ರೀಪಿಲ್ಲಿಂಗ್ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ದಾಳಿ ಮಾಡಿದ್ದಾರೆ.
ಈ ವೇಳೆ ವಿವಿಧ ಕಂಪೆನಿಗಳಿಗೆ ಸೇರಿದ ತುಂಬಿರುವ ಗ್ಯಾಸ್ ಸಿಲಿಂಡರ್ ಹಾಗೂ ಖಾಲಿ ಗ್ಯಾಸ್ ಸಿಲಿಂಡರ್‍ಗಳು ಸೇರಿದಂತೆ ಸುಮಾರು 1.2 ಲಕ್ಷ ರೂ. ಬೆಲೆಬಾಳುವ ಒಟ್ಟು 55 ಗ್ಯಾಸ್ ಸಿಲಿಂಡರ್‍ಗಳು ಪತ್ತೆಯಾಗಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ. ಹಾಗೆಯೇ ಆರೋಪಿಯ ವಿರುದ್ಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.




