Bengaluru | ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ ಎಡಪಕ್ಷಗಳ ಧರಣಿ

ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಮತ್ತು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ ಕಮ್ಯುನಿಸ್ಟ್ ಪಕ್ಷಗಳು ಜಂಟಿಯಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಶನಿವಾರ ಧರಣಿ ನಡೆಸಿದವು.
ಈ ಧರಣಿ ವೇಳೆ ಮಾತನಾಡಿದ ಎಸ್‍ಐಆರ್ ವಿರೋಧಿ ಹೋರಾಟಗಾರ ಎನ್. ರವಿ, ದೇಶಾದ್ಯಂತ ಎಲ್ಲ ಎಡಪಕ್ಷಗಳು ಸೇರಿ ಎಸ್‍ಐಆರ್ ವಿರೋಧಿಸಿ ಹೋರಾಟ ಮಾಡುತ್ತಿವೆ. ಈ ದೇಶದ ದೊಡ್ಡ ದುರಂತವೆಂದರೆ ಪ್ರಜಾತಾಂತ್ರಿಕ ದೇಶ ಕಟ್ಟಲು ಕೋಟ್ಯಂತರ ಜನರು ಹೋರಾಟ ಮಾಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಜನರು ಪ್ರಾಣಗಳನ್ನು ತೆತ್ತಿದ್ದಾರೆ. ಹಿಂದಿನವರು ತ್ಯಾಗ, ಬಲಿದಾನ ಮಾಡಿ ಕಟ್ಟಿದ ಪ್ರಜಾತಂತ್ರ ವ್ಯವಸ್ಥೆಯನ್ನು ಇಂದು ದುರ್ಬಲಗೊಳಿಸುವ ಪ್ರಯತ್ನಗಳಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇವತ್ತು ಚುನಾವಣೆಗಳು ಮಾರಾಟದ ಸರಕಾಗಿಬಿಟ್ಟಿವೆ. ಸಾಂವಿಧಾನಿಕ ಚೌಕಟ್ಟಿನಲ್ಲಿರುವ ಈ ದೇಶವನ್ನು ವ್ಯವಸ್ಥಿತ ಸಂಚಿನಿಂದ ಹಾಳುಗೆಡವಲಾಗುತ್ತಿದೆ. ದೇಶದ ಪ್ರಜಾತಂತ್ರ ವ್ಯವಸ್ಥೆಯ ಅಳಿವು-ಉಳಿವಿನ ತೀರ್ಮಾನ ಆಗುವಂತಹ ಚುನಾವಣಾ ಆಯೋಗವೇ ಮೂಲಭೂತವಾಗಿ ಕೇಂದ್ರ ಸರಕಾರದ ಕೈಗೊಂಬೆಯಾಗಿ ವರ್ತಿಸಿದರೆ ದೇಶದ ಜನರ ಮುಂದಿನ ಗತಿಯೇನು ಎಂದು ಪ್ರಶ್ನಿಸಿದರು.
ಇದೇ ವೇಳೆ, ಎಸ್‍ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತಪ್ಪಾಗಿ ಮತ್ತು ರಾಜಕೀಯ ಪ್ರೇರಿತವಾಗಿ ಕೈಬಿಡಲಾಗಿದೆ ಎಂದು ಧರಣಿನಿರತರು ಆರೋಪಿಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಉಳಿದ ಇಬ್ಬರು ಚುನಾವಣಾ ಆಯುಕ್ತರ ಆಕ್ಷೇಪಣೆಗಳ ನಡುವೆಯೂ ಹಲವು ಪ್ರಮುಖ ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆ. ಈ ಕೂಡಲೇ ಅವರನ್ನು ವಜಾಗೊಳಿಸಬೇಕು ಎಂದು ಧರಣಿನಿರತರು ಒತ್ತಾಯಿಸಿದರು.
ಪ್ರಸ್ತುತ ನಡೆಯುತ್ತಿರುವ ಎಸ್‍ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಪಟ್ಟಿಯಿಂದ ಹೊರಗುಳಿದಿರುವ ಎಲ್ಲರಿಗೂ ಮತದಾನದ ಹಕ್ಕನ್ನು ಮರುಸ್ಥಾಪಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು. ಈ ಧರಣಿಯಲ್ಲಿ ಸಿಪಿಐ, ಸಿಪಿಎಂ ಸೇರಿದಂತೆ ಎಲ್ಲ ಎಡಪಕ್ಷಗಳ ಕಾರ್ಯಕರ್ತರು ಭಾಗವಹಿಸಿದ್ದರು.






