Bengaluru | ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಎನ್‍ಎಸ್‍ಯುಐ ಧರಣಿ

ಬೆಂಗಳೂರು : ವೋಟ್ ಚೋರಿ ನಿಲ್ಲಿಸಿ, ದೇಶ ಉಳಿಸಿ ಹಾಗೂ ಕೇಂದ್ರದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ, ಎನ್‍ಎಸ್‍ಯುಐ ವತಿಯಿಂದ ಮಂಗಳವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಲಾಯಿತು.
ಈ ವೇಳೆ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಗೋಪಿನಾಥ್, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಹಿಂದೆ ಬಿಜೆಪಿ ಹಾಗೂ ಆರೆಸ್ಸೆಸ್ ಬೆಂಬಲವಿದೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಅವರನ್ನು ಮತ್ತೆ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಮತದಾರರ ಹಕ್ಕು ಕಸಿಯುವ ಹಗರಣದ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಜ್ಞಾನೇಶ್ ಕುಮಾರ್ ಅವರ ಕೈವಾಡವಿದೆ. ಈ ಸಂಬಂಧ ಜ್ಞಾನೇಶ್ ಕುಮಾರ್ ಅವರನ್ನು ಬಂಧಿಸಬೇಕು. ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಮತದಾನದ ಹಕ್ಕು ಖಾತರಿಯಾಗಬೇಕು ಎಂದು ಒತ್ತಾಯಿಸಿದರು.
ಎನ್‍ಎಸ್‍ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಮಾತನಾಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ದೇಶಾದ್ಯಂತ ವೋಟ್ ಚೋರಿ ವಿರುದ್ಧ ಹೋರಾಟ ನಡೆಯುತ್ತಿದೆ. ರಾಜ್ಯದಲ್ಲೂ ನ್ಯಾಯಯುತ ಮತ್ತು ಪಾರದರ್ಶಕ ಚುನಾವಣೆಗಾಗಿ ಹೋರಾಟ ಮುಂದುವರಿಸಲಾಗುವುದು ಎಂದರು.
ಧರಣಿಯಲ್ಲಿ ಎನ್‍ಎಸ್‍ಯುಐ ರಾಷ್ಟ್ರೀಯ ಅಧ್ಯಕ್ಷ ವಿನೋದ್ ಜಾಕರ್, ಎಐಸಿಸಿ ಕಾರ್ಯದರ್ಶಿ ಗೋಪಿನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸ್ವಾಮಿ, ಬಿಎಂಟಿಸಿ ಅಧ್ಯಕ್ಷ ವಿ.ಎಸ್.ಆರಾಧ್ಯ, ಜಿಲ್ಲಾಧ್ಯಕ್ಷ ಸರವಣ ಮತ್ತಿತರರು ಹಾಜರಿದ್ದರು.






