Bengaluru | ಗಾಂಜಾ ಸಾಗಾಟ: ಕೇರಳಂ ಮೂಲದ ಇಬ್ಬರು ಆರೋಪಿಗಳ ಬಂಧನ; 317 ಕೆ.ಜಿ ಗಾಂಜಾ, ಒಂದು ಇನ್ನೋವಾ ಕಾರು ಜಪ್ತಿ

ಸಾಂದರ್ಭಿಕ ಚಿತ್ರ
ಬೆಂಗಳೂರು : ನಿಷೇಧಿತ ಮಾದಕ ವಸ್ತುವಾದ ಗಾಂಜಾ ಸಾಗಿಸುತ್ತಿದ್ದ ಹೊರರಾಜ್ಯದ ಇಬ್ಬರು ಆರೋಪಿಗಳನ್ನು ಕುಂಬಳಗೂಡು ಠಾಣೆಯ ಪೊಲೀಸರು ಬಂಧಿಸಿದ್ದು, ಒಟ್ಟು 1.78 ಕೋಟಿ ರೂ. ಮೌಲ್ಯದ 317 ಕೆಜಿ ಗಾಂಜಾ ಹಾಗೂ ಒಂದು ಇನ್ನೋವಾ ಕಾರನ್ನು ಜಪ್ತಿ ಮಾಡಿದ್ದಾರೆ.
ಕೇರಳಂನ ವಿಷ್ಣು(30) ಮತ್ತು ಚಾಂದ್ ಪಾಷ(31) ಬಂಧಿತ ಆರೋಪಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳಿಬ್ಬರು ಇನ್ನೋವಾ ಕಾರಿನಲ್ಲಿ ಒಡಿಶಾದಿಂದ ಬೆಂಗಳೂರಿನ ಮೂಲಕ ಕೇರಳ ರಾಜ್ಯಕ್ಕೆ ಗಾಂಜಾವನ್ನು ಸಾಗಿಸುತ್ತಿದ್ದರು ಎಂಬ ಖಚಿತ ಮಾಹಿತಿಯನ್ನು ಆಧರಿಸಿ, ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣವನ್ನು ದಾಖಲಿಕೊಳ್ಳಲಾಗಿದೆ.
ನಂತರ ಕಾರ್ಯಪ್ರವೃತ್ತರಾದ ಪೊಲೀಸರು, ಮಾಹಿತಿ ನೀಡಿದವರು ತಿಳಿಸಿದ್ದ ಸ್ಥಳಕ್ಕೆ ಧಾವಿಸಿ, ಕೇರಳಂ ರಾಜ್ಯಕ್ಕೆ ಹೋಗುತ್ತಿದ್ದ ಇನ್ನೋವಾ ಕಾರನ್ನು ಕಂಬಿಪುರದ ಈದ್ಗಾ ಮೈದಾನದ ಬಳಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೇರಳಂದಿಂದ ಬೆಂಗಳೂರಿಗೆ ಬಂದು ಆರ್.ಟಿ.ನಗರದಲ್ಲಿ ಕಾರನ್ನು ಸ್ವಯಂ ಚಾಲಿತ ಬಾಡಿಗೆಗೆ ಪಡೆದುಕೊಂಡು, ನಂತರ ಒಡಿಶಾ ರಾಜ್ಯಕ್ಕೆ ತೆರಳಿ ಅಪರಿಚಿತ ವ್ಯಕ್ತಿಯೋರ್ವನಿಂದ ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಲಾಗಿದೆ. ಬೆಂಗಳೂರಿನ ಮೂಲಕ ಕೇರಳಂನ ಕುಮಾರಮಂಗಲಂಗೆ ತೆಗೆದುಕೊಂಡು ಹೋಗಿ ಅಲ್ಲಿನ ಗಿರಾಕಿಗಳಿಗೆ ಗಾಂಜಾವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಉದ್ದೇಶಿಸಲಾಗಿತ್ತು ಎಂದು ವಿಚಾರಣೆಯ ವೇಳೆ ಆರೋಪಿಗಳು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಶಪಡಿಸಿಕೊಂಡ ಮಾದಕ ವಸ್ತುಗಳ ಖರೀದಿ, ಸಾಗಣೆ ಹಾಗೂ ಅವುಗಳನ್ನು ಮಾರಾಟ ಮಾಡಲು ಸಹಕರಿಸುತ್ತಿದ್ದ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.






