Bengaluru | ದೇವಸ್ಥಾನಗಳಲ್ಲಿ ಕಳವು ಮಾಡುತ್ತಿದ್ದ ಆರೋಪಿಗಳ ಬಂಧನ

ಬೆಂಗಳೂರು : ದೇವಸ್ಥಾನಗಳಲ್ಲಿ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ತಲಘಟ್ಟಪುರ ಠಾಣಾ ಪೊಲೀಸರು ಬಂಧಿಸಿದ್ದು, ಒಟ್ಟು 8.10 ಲಕ್ಷ ರೂ. ಮೌಲ್ಯದ 4 ದೇವರ ವಿಗ್ರಹಗಳು, ಒಂದು ಚಿನ್ನದ ತಾಳಿ, ಬೆಳ್ಳಿ ಮತ್ತು ಹಿತ್ತಾಳೆ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 3 ದ್ವಿ-ಚಕ್ರ ವಾಹನಗಳ ವಶಕ್ಕೆ ಪಡೆದಿದ್ದಾರೆ.
ಗಟ್ಟಿಗೆರಪಾಳ್ಯದಲ್ಲಿರುವ ಶ್ರೀ ಭಕ್ತಿ ಆಂಜನೇಯಸ್ವಾಮಿ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಮುರಿದು, ದೇವಸ್ಥಾನದಲ್ಲಿದ್ದ ಬೆಳ್ಳಿಯ ಮತ್ತು ಹಿತ್ತಾಳೆಯ ವಸ್ತುಗಳು ಮತ್ತು ಸ್ಟೀಲ್ ಹುಂಡಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ಸಲ್ಲಿಕೆಯಾಗಿತ್ತು. ದೂರಿನ ಅನ್ವಯ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು.
ವಿವಿಧ ಆಯಾಮಗಳಲ್ಲಿ ಪ್ರಕರಣದ ತನಿಖೆಯನ್ನು ನಡೆಸಿದ ಪೊಲೀಸರು, ಖಚಿತ ಮಾಹಿತಿಯನ್ನು ಕಲೆಹಾಕಿ, ಹೊಸೂರು ರಸ್ತೆಯ ಮಡಿವಾಳ ಬಸ್ ನಿಲ್ದಾಣದ ಬಳಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಆತನನ್ನು ವಿಚಾರಣೆಗೊಳಪಡಿಸಿದಾಗ ತನ್ನ ಸಹಚರನ ಜೊತೆಗೂಡಿ ದೇವಾಸ್ಥಾನದಲ್ಲಿ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಆರೋಪಿ ನೀಡಿದ ಸುಳಿವನ್ನು ಆಧರಿಸಿ ಬನ್ನೇರಘಟ್ಟ ರಸ್ತೆಯ ಕೋಳಿ ಫಾರಂ ಗೇಟ್ ಬಳಿ ಆತನ ಸಹಚರನನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ, ಕಳವು ಮಾಡಿದ ದೇವಸ್ಥಾನದ ವಸ್ತುಗಳನ್ನು ಅಂಜಿನಪುರದ ಆವಲಹಳ್ಳಿಯಲ್ಲಿ ವಾಸವಿರುವ ಆರೋಪಿಗಳ ಪರಿಚಯಸ್ಥನಿಗೆ ನೀಡಿರುವುದಾಗಿ ತಿಳಿಸಿರುತ್ತಾರೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 4 ದೇವರ ಪಂಚಲೋಹದ ವಿಗ್ರಹಗಳು, ಒಂದು ಚಿನ್ನದ ತಾಳಿ, ದೇವರ ಬೆಳ್ಳಿ ಮತ್ತು ಹಿತ್ತಾಳೆ ವಸ್ತುಗಳು, ಒಂದು ಸ್ಟೀಲ್ ಹುಂಡಿ, ಕೃತ್ಯಕ್ಕೆ ಬಳಸಿದ್ದ 3 ದ್ವಿ ಚಕ್ರ ವಾಹನಗಳ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಬಂಧನದಿಂದ ತಲಘಟ್ಟಪುರ ಪೊಲೀಸ್ ಠಾಣೆಯ 2 ದೇವಸ್ಥಾನದ ಕಳವು ಪ್ರಕರಣ 1 ದ್ವಿ-ಚಕ್ರ ವಾಹನ ಕಳವು ಪ್ರಕರಣ ಹಾಗೂ ಬನ್ನೇರುಘಟ್ಟ ಪೊಲೀಸ್ ಠಾಣೆಯ 3 ದೇವಸ್ಥಾನದ ಕಳವು ಪ್ರಕರಣಗಳು ಸೇರಿದಂತೆ ಒಟ್ಟು 6 ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ಉಳಿದ 2 ದ್ವಿ-ಚಕ್ರ ವಾಹನಗಳ ಮಾಲಕರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.






