Bengaluru | ಕಳ್ಳರೆಂದು ಅಮಾಯಕರ ಮೇಲೆ ಹಲ್ಲೆ; ಪ್ರಕರಣ ದಾಖಲು

ಬೆಂಗಳೂರು : ಕಳ್ಳರು ಎಂಬ ಅನುಮಾನದಿಂದ ಅಮಾಯಕರಿಬ್ಬರ ಮೇಲೆ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಾಹಿದ್ ಹಾಗೂ ಫರ್ದೀನ್ ಪಾಷಾ ಎಂಬ ಯುವಕರು ಹಲ್ಲೆಗೊಳಗಾದವರು ಎಂದು ತಿಳಿದು ಬಂದಿದ್ದು, 10 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ವಾಹನಕ್ಕೆ ಅಡ್ಡ ಬಂದ ವಿಚಾರಕ್ಕಾಗಿ ಶಾಹೀನ್ ಹಾಗೂ ಫರ್ದೀನ್ ಪಾಷಾ ನಡುವೆ ರಸ್ತೆಯಲ್ಲಿ ವಾಗ್ವಾದವುಂಟಾಗಿದೆ. ಇಬ್ಬರು ಜಗಳವಾಗುತ್ತಿದ್ದ ವೇಳೆ ಅಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬ ಕಳ್ಳರು ಬಂದಿದ್ದಾರೆ ಎಂದು ಕೂಗಾಡಿ, ಯುವಕರನ್ನು ಕಳ್ಳರೆಂದು ಬಿಂಬಿಸಿದ್ದಾನೆ. ಇದನ್ನು ನಂಬಿದ ಸ್ಥಳೀಯರು ಕೂಡಲೇ ಶಾಹಿದ್ ಹಾಗೂ ಫರ್ದೀನ್ ಪಾಷಾನನ್ನು ಅಟ್ಟಾಡಿಸಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಶಾಹಿದ್ ಮೇಲೆ ಗಂಭೀರ ಹಲ್ಲೆ ನಡೆಸಲಾಗಿದ್ದು, ಅವರ ಮೊಬೈಲ್ ಫೋನ್ನ್ನು ಒಡೆದು ಹಾಕಲಾಗಿದೆ. ಘಟನೆಯ ದೃಶ್ಯಾವಳಿಗಳು ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಹಲ್ಲೆಗೊಳಗಾದ ಶಾಹಿದ್ ಅವರು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಹಲ್ಲೆ ಎಸಗಿದ 10 ಜನರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




