ಪುಲಿಕೇಶಿನಗರದಲ್ಲಿ ಸ್ಫೋಟ ಪ್ರಕರಣ; ರಾಯಚೂರಿನ ಮಸ್ಕಿಯಲ್ಲಿ ಆರೋಪಿಯೋರ್ವನ ಬಂಧನ

ಸಾಂದರ್ಭಿಕ ಚಿತ್ರ | Image by Rochak Shukla on Magnific
ಬೆಂಗಳೂರು : ಪುಲಿಕೇಶಿನಗರದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ನಡೆದ ಅನುಮಾನಾಸ್ಪದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರಿನ ಮಸ್ಕಿಯಲ್ಲಿ ಆರೋಪಿಯೊಬ್ಬನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.
ಜರ್ಮಿಯಾ ರಸ್ತೆಯಲ್ಲಿರುವ ನಿರ್ಮಾಣ ಹಂತದ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಅ.20ರಂದು ಭೀಕರ ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ ಕಟ್ಟಡದ ಕಾವಲುಗಾರ ಅಲ್ಲಾವುದ್ದೀನ್ ಹಾಗೂ ಕಾರ್ಮಿಕ ಸೂರಜ್ನ ತಲೆ ಹಾಗೂ ಮುಖದ ಭಾಗಕ್ಕೆ ಗಂಭೀರವಾಗಿ ಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿತ್ತು.
ಘಟನೆಯ ಗಂಭೀರತೆಯನ್ನು ಪರಿಗಣಿಸಿ ಭಯೋತ್ಪಾದಕ ನಿಗ್ರಹ ದಳ(ಎಟಿಎಸ್), ಆಂತರಿಕ ಭದ್ರತಾ ವಿಭಾಗ (ಐಎಸ್ಡಿ) ಹಾಗೂ ಬಾಂಬ್ ಪತ್ತೆ ದಳದ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಕೂಲಂಕಷವಾಗಿ ಪರಿಶೀಲನೆ ಕೈಗೊಂಡಿದ್ದರು.
ಇದೀಗ ಬೆಂಗಳೂರು ಪೂರ್ವ ವಿಭಾಗದಪೊಲೀಸರ ತಂಡ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಘಟನಾ ಸ್ಥಳಕ್ಕೆ ಕರೆತಂದು ಪ್ರಸ್ತುತ ತೀವ್ರ ವಿಚಾರಣೆ ನಡೆಸುತ್ತಿರುವುದಾಗಿ ಖಚಿತಪಡಿಸಿದ್ದಾರೆ. ಪ್ರಕರಣದಲ್ಲಿ ಈಗ ವಶಕ್ಕೆ ಪಡೆದಿರುವ ವ್ಯಕ್ತಿಯ ಪಾತ್ರದ ಕುರಿತು ಮಾಹಿತಿ ಪೊಲೀಸ್ ವಿಚಾರಣೆಯಿಂದ ಬಹಿರಂಗವಾಗಬೇಕಿದೆ.






