ಬೆಂಗಳೂರು ಮೆಟ್ರೋದಲ್ಲಿ ಯುವತಿಯ ವಿಡಿಯೋ ಚಿತ್ರೀಕರಣ ಆರೋಪ: ಪ್ರಕರಣ ದಾಖಲು

ಬೆಂಗಳೂರು : ಮೆಟ್ರೋ ರೈಲಿನಲ್ಲಿ ಅನುಮತಿಯಿಲ್ಲದೆ ರಹಸ್ಯವಾಗಿ ವಿಡಿಯೋ ಮಾಡುತ್ತಿದ್ದ ಪ್ರಯಾಣಿಕನೊಬ್ಬನ ವಿರುದ್ಧ ಯುವತಿಯು ನೀಡಿದ ದೂರಿನ ಅನ್ವಯ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಯುವತಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಳು. ಮಂಗಳವಾರ ಸಂಜೆ ಸುಮಾರು 4.30ರ ವೇಳೆಗೆ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಸಹ ಪ್ರಯಾಣಿಕನೊಬ್ಬ ತನ್ನನ್ನು ರಹಸ್ಯವಾಗಿ ವಿಡಿಯೋ ಚಿತ್ರೀಕರಿಸುತ್ತಿದ್ದ ವಿಡಿಯೋದಲ್ಲಿ ತಿಳಿಸಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ತಾನು ಧರಿಸಿದ್ದ ಉಡುಪನ್ನೂ ವಿಡಿಯೋದಲ್ಲಿ ತೋರಿಸಿರುವ ಯುವತಿ, ಮೈತುಂಬ ಬಟ್ಟೆ ಧರಿಸಿದ್ದರೂ ಇಂತಹ ಘಟನೆ ನಡೆದಿದೆ. ತನ್ನನ್ನು ವಿಡಿಯೋ ಮಾಡುತ್ತಿದ್ದಾನೆ ಎಂದು ಆರೋಪಿಸಿದ ವ್ಯಕ್ತಿಯನ್ನು ಯುವತಿ ಮೆಟ್ರೋ ರೈಲಿನಲ್ಲೇ ಪ್ರಶ್ನಿಸಿದ್ದಾರೆ. ಆತನ ಮೊಬೈಲ್ ಫೋನ್ ಹಿಡಿದುಕೊಂಡು, ತನನ್ನ ವಿಡಿಯೋ ಏಕೆ ಮಾಡುತ್ತರುವೆ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಯುವತಿಯು ಆತನ ಮೊಬೈಲ್ ಫೋನ್ ಕಿತ್ತುಕೊಂಡು ಮೆಟ್ರೋನ ಭದ್ರತಾ ಸಿಬ್ಬಂದಿಗೆ ನೀಡಿದ್ದಾಳೆ. ಆದರೆ ಆತ ಅದನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಯುವತಿಯು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಅನ್ವಯ ಎಫ್ಐಆರ್ ದಾಖಲಾಗಿದೆ.






