Bengaluru | 6.52ಲಕ್ಷ ರೂ. ಮೌಲ್ಯದ ನಿಷೇಧಿತ ಮಾದಕ ವಸ್ತುಗಳ ಜಪ್ತಿ; ಆರು ಮಂದಿ ಆರೋಪಿಗಳ ಬಂಧನ

ಬೆಂಗಳೂರು : ನಿಷೇಧಿತ ಮಾದಕ ವಸ್ತುಗಳ ಮಾರಾಟದ ವಿರುದ್ಧ ಆರ್.ಟಿ.ನಗರ, ಎಲೆಕ್ಟ್ರಾನಿಕ್ ಸಿಟಿ, ಬಾಣಸವಾಡಿ ಪೊಲೀಸರು ಕಾರ್ಯಾಚರಣೆ ನಡೆಸಿ, ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಇಬ್ಬರು ಹೊರ ರಾಜ್ಯದವರು ಸೇರಿ 6 ಮಂದಿ ಆರೋಪಿಗಳನ್ನು ಬಂದಿಸಿದ್ದು, 6.52 ಲಕ್ಷ ರೂ. ಮೌಲ್ಯದ 9.89 ಕೆಜಿ ಗಾಂಜಾ, 16 ಗ್ರಾಂ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಿಹಾರ ಮೂಲದ ಸುಮನ್ಕುಮಾರ್(24) ಮತ್ತು ವಿಕಾಸ್ ಕುಮಾರ್(22) ಎಂಬಾತನನ್ನು ಬಂಧಿಸಿದ್ದಾರೆ. ಆರ್ಟಿನಗರ ಠಾಣೆ ಪೊಲೀಸರು ಸ್ಥಳೀಯ ನಿವಾಸಿಗಳಾದ ಸುಪಿಯಾನ್ ಪಾಷ(26), ಮುರುಗನ್ (27) ಮತ್ತು ಜಯಸೂರ್ಯ (18) ಎಂಬಾತನನ್ನು ಬಂಧಿಸಿದ್ದಾರೆ. ಬಾಣಸವಾಡಿ ಠಾಣೆ ಪೊಲೀಸರು ಗೋವಿಂದಪುರ ನಿವಾಸಿ ಮುಹಮ್ಮದ್ ಖಲೀಲ್ ಬೇಗ್(38) ಎಂಬುವವರನ್ನು ಬಂಧಿಸಿದ್ದಾರೆ.
ವಶಕ್ಕೆ ಪಡೆದ 6 ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದಾಗ, ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಹೊರರಾಜ್ಯದ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.




