Bengaluru | ಡೇಟಿಂಗ್ ಅಪ್ಲಿಕೇಷನ್ ಮೂಲಕ ವಂಚಿಸಿ ದರೋಡೆ: ಆರೋಪಿಗಳ ಬಂಧನ

ಬೆಂಗಳೂರು : ಡೇಟಿಂಗ್ ಅಪ್ಲಿಕೇಷನ್ ಮೂಲಕ ಯುವತಿಯ ಸೋಗಿನಲ್ಲಿ ಮನೆಗೆ ಬಂದ ಇಬ್ಬರು ಮಂಗಳಮುಖಿಯರು, ವ್ಯಕ್ತಿಯೊಬ್ಬರಿಗೆ ಚಾಕು ತೋರಿಸಿ ಬೆದರಿಸಿ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮನೆ ಮಾಲಕ ರಾಜು ನೀಡಿದ ದೂರಿನ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ನಾಗರಭಾವಿಯ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಅ.22ರಂದು ಅವರ ಪತ್ನಿ ತಮಿಳುನಾಡಿಗೆ ತೆರಳಿದ್ದರು. ಮರುದಿನ ರೋಹಿತ್ ಅವರು ಹೆಸರಘಟ್ಟದಲ್ಲಿರುವ ತಮ್ಮ ಸ್ವಂತ ಮನೆಗೆ ತೆರಳುವ ಮುನ್ನ, ಒಂದು ದಿನ ಉಳಿದುಕೊಳ್ಳಲು ಬಂದಿದ್ದ ಸ್ನೇಹಿತ ಹರ್ಷವರ್ಧನ್ಗೆ ಮನೆಯ ಕೀಲಿ ನೀಡಿದ್ದರು. ಅಂದು ರಾತ್ರಿ ಹರ್ಷವರ್ಧನ್ ಡೇಟಿಂಗ್ ಆಪ್ ಮೂಲಕ ಯುವತಿಯೊಬ್ಬಳೊಂದಿಗೆ ಚಾಟ್ ಮಾಡಿ ಮನೆಗೆ ಆಹ್ವಾನಿಸಿದ್ದರು.
ಅದರಂತೆ ಯುವತಿಯ ಸೋಗಿನಲ್ಲಿ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಬಂದ ವ್ಯಕ್ತಿಯನ್ನು ಕಂಡು ಹರ್ಷವರ್ಧನ್ ಮೊದಲಿಗೆ ಯುವತಿ ಎಂದು ಭಾವಿಸಿದ್ದರು. ಆದರೆ ಮನೆಯೊಳಗೆ ಬಂದ ಬಳಿಕ ಆಕೆ ಮಂಗಳಮುಖಿ ಎಂಬುದು ತಿಳಿದು ಬಂದಿದೆ. ಬಳಿಕ ಇಂಗ್ಲಿಷ್ನಲ್ಲಿ ಮಾತನಾಡುತ್ತಾ ಮತ್ತೊಬ್ಬ ಮಂಗಳಮುಖಿಯನ್ನು ಮನೆಗೆ ಕರೆಸಿಕೊಂಡಿದ್ದಾರೆ. ಇಬ್ಬರೂ ಮನೆಯಲ್ಲಿದ್ದ ವಸ್ತುಗಳನ್ನು ಪರಿಶೀಲಿಸಲು ಮುಂದಾಗಿದ್ದಾರೆ. ಇದನ್ನು ಪ್ರಶ್ನಿಸಿದ ಹರ್ಷವರ್ಧನ್ಗೆ ಚಾಕು ತೋರಿಸಿ ಬೆದರಿಸಿದ್ದು, ಸುಮ್ಮನಿರದಿದ್ದರೆ ಪೊಲೀಸರಿಗೆ ಕರೆ ಮಾಡುವುದಾಗಿ ಹೆದರಿಸಿದ್ದಾರೆ ಎನ್ನಲಾಗಿದೆ.
ನಂತರ ಮನೆಯಲ್ಲಿದ್ದ 226 ಗ್ರಾಂ ತೂಕದ ವಿವಿಧ ಚಿನ್ನಾಭರಣಗಳನ್ನು ದೋಚಿಕೊಂಡು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಕಳವಾದ ಚಿನ್ನಾಭರಣಗಳ ಮೌಲ್ಯ ಸುಮಾರು 20 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.






