Bengaluru | ನಕಲಿ ಔಷಧಿಗಳ ಮಾರಾಟ ದಂಧೆ: ಆರೋಪಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ಈ.ಡಿ.

ಸಾಂದರ್ಭಿಕ ಚಿತ್ರ | Image by 8photo on Magnific
ಬೆಂಗಳೂರು : ನಕಲಿ ಔಷಧಿಗಳ ಮಾರಾಟ ದಂಧೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಕೃಪಾ ಹೆಲ್ತ್ ಕೇರ್ ನ ಮಾಲಕ ವೀರೇಶ್ ಕುಮಾರ್ ಅವರಿಗೆ ಸೇರಿದ 9 ಲಕ್ಷ ರೂ.ಗಳನ್ನು ಹೊಂದಿದ್ದ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯದ(ಈ.ಡಿ.) ಅಧಿಕಾರಿಗಳು ತಾತ್ಕಾಲಿಕವಾಗಿ ಸ್ಥಗಿತ(ಫ್ರೀಜ್) ಮಾಡಿದ್ದು, ಉಳಿದ ಆರೋಪಿಗಳಿಗೆ ಸೇರಿದ ಡಿಜಿಟಲ್ ಸಾಧನಗಳು, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬಿಡದಿ ಸಮೀಪದ ಸಿ.ಕೆ. ತಾಂಡ್ಯ ಗ್ರಾಮದಲ್ಲಿರುವ ವಸತಿಯೊಂದರಲ್ಲಿ ಯಾವುದೇ ಪರವಾನಗಿ, ಅನುಮತಿ ಅಥವಾ ಅಧಿಕೃತ ದಾಖಲೆಗಳಿಲ್ಲದೆ ಔಷಧಗಳನ್ನು ಸಂಗ್ರಹಿಸಿಡಲಾಗಿತ್ತು. ಹಾಗೆಯೇ ಆ ಔಷಧಗಳ ಮೇಲಿದ್ದ ಲೇಬಲ್ಗಳನ್ನು ಬದಲಾಯಿಸಲಾಗುತ್ತಿತ್ತು. ನಿಖರ ಮಾಹಿತಿಯನ್ನು ಆಧರಿಸಿ, ಆ.18ರಂದು ಔಷಧ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿದ್ದರು.
ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ಗೆ ಸಂಬಂಧಿಸಿದಂತೆ ಈ.ಡಿ. ಅಧಿಕಾರಿಗಳು, ‘ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ(ಪಿಎಂಎಲ್ಎ)-2002'ರ ಸೆಕ್ಷನ್ 17ರ ಅಡಿಯಲ್ಲಿ ಶೋಧ ಮತ್ತು ಜಪ್ತಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.
ಔಷಧ ಪರವಾನಗಿ ಅಥವಾ ಅನುಮತಿಯಿಲ್ಲದೆ ಔಷಧಿಗಳನ್ನು ತಯಾರಿಸಲು, ಮರುಪ್ಯಾಕೇಜ್ ಮಾಡಲು ಮತ್ತು ಮರುಲೇಬಲ್ ಮಾಡಲು, ಆರೋಪಿ ಆರ್.ಪ್ರಶಾಂತ್ ಬಿಡದಿ ಬಳಿ ಫಾರ್ಮ್ಹೌಸ್ ಒಂದನ್ನು ವ್ಯವಸ್ಥೆಗೊಳಿಸಿದ್ದನು ಎಂದು ಈ.ಡಿ. ತನಿಖೆಯಿಂದ ತಿಳಿದುಬಂದಿದೆ.
ವಿವಿಧ ರಾಜ್ಯಗಳ ಉತ್ಪಾದನಾ ಕೇಂದ್ರಗಳಿಂದ ಪಡೆಯಲಾದ ಅಗ್ಗದ ಔಷಧಿಗಳನ್ನು ಫಾರ್ಮ್ಹೌಸ್ನಲ್ಲಿ ಮರುಪ್ಯಾಕ್ ಮಾಡಲಾಗಿದೆ. ಮತ್ತು ಜನರಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಈ.ಡಿ. ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣ ದಾಖಲಾಗಿ ತನಿಖೆ ನಡೆಯುವಾಗ ಆರೋಪಗಳಿಂದ ತಪ್ಪಿಸುವ ಉದ್ದೇಶದಿಂದ ಕೃಪಾ ಹೆಲತ್ ಕೇರ್ ಸಂಸ್ಥೆಯು ಇತರ ಔಷಧೀಯ ಸಂಸ್ಥೆಗಳಿಗೆ ಮತ್ತು ಆಸ್ಪತ್ರೆಗಳಿಗೆ ಅಸಲಿ ಔಷಧಿಗಳನ್ನು ಪೂರೈಕೆ ಮಾಡಿದೆ ಎಂದು ಈ.ಡಿ. ಅಧಿಕಾರಿಗಳು ಹೇಳಿದ್ದಾರೆ.






