Bengaluru | ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು : ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದು, 11ಲಕ್ಷ ರೂ.ಮೌಲ್ಯದ 74 ಗ್ರಾಂನ 3 ಚಿನ್ನದ ಮಾಂಗಲ್ಯ ಸರಗಳು ಮತ್ತು ದ್ವಿ-ಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ.
ಕೂಡ್ಲುಗೇಟ್ ಬಳಿಯಿರುವ ಗಾರ್ಮೆಂಟ್ವೊಂದರಲ್ಲಿ ಟೈಲರ್ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ಅ.20ರಂದು ಕೂಡ್ಲುಗೇಟ್ನ ಬಸ್ ನಿಲ್ದಾಣದ ಸರ್ವಿಸ್ ರಸ್ತೆಯಲ್ಲಿರುವ ಟಾಕೀಸ್ವೊಂದರ ಮುಂಭಾಗದಲ್ಲಿ ನಡೆದುಕೊಂಡು ಬರುತ್ತಿರುವಾಗ ಎದುರಿನಿಂದ ದ್ವಿ-ಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದಾರೆ. ದೂರಿನ ಅನ್ವಯ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿದೆ.
ವಿವಿಧ ಆಯಾಮಗಳಲ್ಲಿ ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರು ಖಚಿತ ಮಾಹಿತಿಯ ಆಧರಿಸಿ ಮುನಿಯಪ್ಪ ಕಾಂಪ್ಲೆಕ್ಸ್ ಬಳಿ ಓರ್ವ ಆರೋಪಿಯನ್ನು ಕಳವು ಮಾಡಿದ 2 ಚಿನ್ನದ ಸರವನ್ನು ಹಾಗೂ ಕೃತ್ಯಕ್ಕೆ ಬಳಸಿದ ದ್ವಿ-ಚಕ್ರ ವಾಹನ ಸಮೇತ ವಶಕ್ಕೆ ಪಡೆದಿದ್ದಾರೆ. ಆತನನ್ನು ವಿಚಾರಣೆ ಮಾಡಿದಾಗ, ಈ ಪ್ರಕರಣದಲ್ಲಿ ಅಪ್ರಾಪ್ತ ಬಾಲಕನೊಂದಿಗೆ ಸೇರಿಕೊಂಡು ಕೃತ್ಯವೆಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿಯು ನೀಡಿದ ಮಾಹಿತಿ ಮೇರೆಗೆ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಠಾಣೆಗೆ ಕರೆಸಿ, ಸೂಕ್ತ ವಿಚಾರಣೆ ನಡೆಸಿ, ಮಡಿವಾಳದಲ್ಲಿರುವ ಬಾಲ ನ್ಯಾಯಾ ಮಂಡಳಿಗೆ ಒಪ್ಪಿಸಲಾಗಿದೆ. ಕಳವು ಮಾಡಿದ ಮತ್ತೊಂದು ಚಿನ್ನದ ಸರವನ್ನು ಆರೋಪಿಯು ವಾಸವಿರುವ ಪರಪ್ಪನ ಅಗ್ರಹಾರದ ರಾಯಸಂದ್ರದ ವಾಸದ ಮನೆಯಲ್ಲಿ ಜಪ್ತಿ ಮಾಡಲಾಗಿದೆ.
ಆರೋಪಿಯ ಬಂಧನದಿಂದ ಬಂಡೇಪಾಳ್ಯ ಪೊಲೀಸ್ ಠಾಣೆಯ ಒಂದು ಸರಗಳ್ಳತನ ಪ್ರಕರಣ, ಹೆಬ್ಬಗೋಡಿ ಪೊಲೀಸ್ ಠಾಣೆಯ 4 ಸರಗಳ್ಳತನ ಪ್ರಕರಣಗಳು, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಒಂದು ಸರಗಳ್ಳತನ ಪ್ರಕರಣ ಸೇರಿದಂತೆ ಒಟ್ಟು 6 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿವೆ.






