Bengaluru | ಹಾಕಿ ತಂಡದ ಮಾಜಿ ನಾಯಕನ ಮನೆಯಲ್ಲಿ ಕಳ್ಳತನ, ಆರೋಪಿಗಳ ಪತ್ತೆಗೆ ಶೋಧ

ಬೆಂಗಳೂರು : ಮಾಸ್ಕೋ ಒಲಂಪಿಕ್ಸ್ ನ ಚಿನ್ನದ ಪದಕ ಗೆದ್ದಿದ್ದ ಭಾರತ ಹಾಕಿ ತಂಡದ ಮಾಜಿ ನಾಯಕ ಸೋಮಯ್ಯ ಅವರ ಮನೆಯಲ್ಲಿ ಕಳ್ಳತನವಾಗಿದ್ದು, 30 ಸಾವಿರ ನಗದು ಸೇರಿದಂತೆ 3.53 ಲಕ್ಷ ರೂ. ಮೌಲ್ಯದ ಸ್ವರ್ಣ ಹಾಗೂ ಬೆಳ್ಳಿ ಪದಕಗಳನ್ನು ಕದ್ದೊಯ್ದಿರುವ ಘಟನೆ ನಡೆದಿದೆ. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ.
ಎಚ್ಎಎಲ್ 3ನೇ ಹಂತದಲ್ಲಿರುವ ತಿಪ್ಪಸಂದ್ರದ ವಾಸವಿರುವ ಸೋಮಯ್ಯ ಕುಟುಂಬದೊಂದಿಗೆ ಆ.25ರಂದು ಬೆಳಗ್ಗೆ ನಗರದಿಂದ ಕೊಡಗಿಗೆ ಹೋಗಿದ್ದಾರೆ. ಆ ಸಮಯದಲ್ಲಿ ಕಳ್ಳರು ಅವರ ಮನೆಯ ಮುಂಬಾಗಿಲಿನ ಬೀಗ ಒಡೆದು, ಒಳಗೆ ನುಗ್ಗಿ ಚಿನ್ನ, ಬೆಳ್ಳಿ, ಕಂಚಿನ ಪದಕ, ಹಣ, ಆಭರಣ ದೋಚಿ ಪರಾರಿಯಾಗಿದ್ದಾರೆ.
ಅ.28ರಂದು ಬೆಳಗ್ಗೆ ನೆರೆಮನೆಯವರಾದ ನಾರಾಯಣ್ ಎಂಬುವವರು ಸೋಮಯ್ಯ ಅವರ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿ ಕಳ್ಳತನ ವಾಗಿರಬಹುದೆಂದು ತಿಳಿದು ತಕ್ಷಣ ಅವರಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಸೋಮಯ್ಯ ಅವರು ತಕ್ಷಣ ಕೊಡಗಿನಿಂದ ವಾಪಸ್ ಬಂದು ನೆರೆಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅ.28ರಂದು ಬೆಳಗಿನಜಾವ 2.30ರ ಸುಮಾರಿಗೆ ಇಬ್ಬರು ಕಳ್ಳರು ಮನೆಯ ಬಾಗಿಲನ್ನು ಮುರಿದು ಒಳಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ. ಇಬ್ಬರ ಪೈಕಿ ಒಬ್ಬಾತ ನೀಲಿ ಬಣ್ಣದ ಶರ್ಟ್ ಹಾಗೂ ಮತ್ತೊಬ್ಬ ಕೆಂಪು ಬಣ್ಣದ ಶರ್ಟ್ ಧರಿಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಸೋಮಯ್ಯ ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳ್ಳರು ಖದೀಮರು 3 ಸಾವಿರ ಬೆಲೆಯ 144 ಗ್ರಾಂನ 2 ಬೆಳ್ಳಿ ಟ್ರೋಫಿಗಳು, 1.30 ಲಕ್ಷ ರೂ. ಮೌಲ್ಯದ ಚಿನ್ನದ ಬಳೆ, 45 ಸಾವಿರ ಬೆಲೆಯ 200 ಗ್ರಾಂನ 6 ಬೆಳ್ಳಿ ಸ್ಪೂನ್ ಗಳು. 18 ಸಾವಿರ ಬೆಲೆಯ 80 ಗ್ರಾಂನ ಬೆಳ್ಳಿ ಪಾಟ್ರ್ಸ್, 1 ಲಕ್ಷ ಬೆಲೆಯ 8 ಗ್ರಾಂ ಚಿನ್ನದ ಕಾಯಿನ್ ಹಾಗೂ 30 ಸಾವಿರ ಹಣ ದೋಚಿದ್ದು, ಅವುಗಳ ಒಟ್ಟು ಮೌಲ್ಯ 3.53 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.






