ಸಚಿವರ ಎದುರೇ ಬಿಜೆಪಿ-ಕಾಂಗ್ರೆಸ್ ಶಾಸಕರ ಗಲಾಟೆ: ಕೈ ಕೈ ಮಿಲಾಯಿಸುವ ಹಂತಕ್ಕೆ ತಿರುಗಿದ ಜಟಾಪಟಿ

ಬೆಂಗಳೂರು : ಕೆ.ಆರ್.ಪುರ ಕ್ಷೇತ್ರದ ಟಿನ್‍ಫ್ಯಾಕ್ಟರಿ ಬಳಿ ವಾರ್ಡ್ ಒನ್ ಎರಡನೇ ಹಂತದ ಅಭಿಯಾನದ ವೇಳೆ ಬಿಜೆಪಿ ಶಾಸಕ ಬೈರತಿ ಬಸವರಾಜ್ ಹಾಗೂ ಕಾಂಗ್ರೆಸ್ ಎಂಎಲ್‍ಸಿ ನಾರಾಯಣಸ್ವಾಮಿ ನಡುವೆ ತೀವ್ರ ಗಲಾಟೆ ಸಂಭವಿಸಿದ್ದು, ಸಚಿವ ಕೃಷ್ಣಬೈರೇಗೌಡರ ಎದುರೇ ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿರುವ ಘಟನೆ ಶನಿವಾರ ವರದಿಯಾಗಿದೆ.
ವಾರ್ಡ್‍ಗಳ ಅಭಿವೃದ್ಧಿ ಮತ್ತು ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜಿಬಿಎ ವ್ಯಾಪ್ತಿಯಲ್ಲಿ ಒನ್ ವಾರ್ಡ್ ಅಭಿಯಾನ ನಡೆಯುತ್ತಿದೆ. ಶನಿವಾರ ಬೆಳಗ್ಗೆ 2ನೇ ಹಂತದ ವಾರ್ಡ್ ಒನ್ ಅಭಿಯಾನಕ್ಕೆ ಸಚಿವ ಕೃಷ್ಣಬೈರೇಗೌಡ ಕೆ.ಆರ್.ಪುರ ಕ್ಷೇತ್ರದ ಟಿನ್ ಫ್ಯಾಕ್ಟರಿ ಬಳಿ ಚಾಲನೆ ನೀಡಿದರು. ಈ ವೇಳೆ ಕೆ.ಆರ್.ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಮತ್ತು ಎಂಎಲ್‍ಸಿ ನಾರಾಯಣಸ್ವಾಮಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕ್ಷೇತ್ರದಲ್ಲಿ ರಸ್ತೆಗುಂಡಿ ಮುಚ್ಚಿಲ್ಲವೆಂದು ಸ್ಥಳೀಯರು ಸಚಿವರಿಗೆ ದೂರು ನೀಡಲು ಮುಂದಾದರು. ಆಗ ಎಂಎಲ್‍ಸಿ ನಾರಾಯಣಸ್ವಾಮಿ, ಸ್ಥಳೀಯರಿಗೆ ಕ್ಷೇತ್ರದ ಶಾಸಕರು ಏನು ಕೆಲಸ ಮಾಡಿಲ್ಲ ಎಂದು ಜೋರು ದನಿಯಲ್ಲಿ ವಾಗ್ದಾಳಿ ನಡೆಸಿದರು. ಮಧ್ಯೆ ಪ್ರವೇಶಿಸಿದ ಶಾಸಕ ಬೈರತಿ ಬಸವರಾಜ್ ನಡುವೆ ಗಲಾಟೆ ನಡೆಯಿತು. ಕೈ ಕೈ ಮಿಲಾಯಿಸುವ ಜಗಳ ಹಂತಕ್ಕೆ ತಲುಪಿದಾಗ ಪೊಲೀಸರು ಪರಿಸ್ಥಿತಿ ನಿಭಾಯಿಸಲು ಹರಸಾಹಸಪಟ್ಟರು.
ಇನ್ನು, ಗಲಾಟೆ ಬಳಿಕ ಸಚಿವ ಕೃಷ್ಣಬೈರೇಗೌಡರ ಎದುರು ಬೈರತಿ ಬಸವರಾಜ್ ಪರಿಸ್ಥಿತಿ ವಿವರಿಸಿದರು. ಆಗ ಸಚಿವರು ಸಮಾಧಾನಪಡಿಸಲು ಮುಂದಾದರು.
ಈ ಘಟನೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಶಾಸಕ ಬೈರತಿ ಬಸವರಾಜ್, ನಮ್ಮ ಭಿಕ್ಷೆಯಿಂದ ನಾರಾಯಣಸ್ವಾಮಿ ಎಂಎಲ್‍ಸಿ ಆಗಿದ್ದಾನೆ. ನಮ್ಮ ಜೊತೆ ಇದ್ದವನು, ಸಚಿವರಿಗೆ ಕ್ಷೇತ್ರದ ಸಮಸ್ಯೆ ಹೇಳಲು ಹೋದರೆ ನಮ್ಮ ಕಾರ್ಯಕರ್ತನ ಮೇಲೆಯೇ ಗಲಾಟೆ ಮಾಡಿ ಹಲ್ಲೆ ಮಾಡಲು ಬರುತ್ತಾನೆ. ಈ ರೀತಿ ಮಾಡುವುದು ಎಷ್ಟು ಸರಿ ಎಂದರು.






