Bengaluru | ವೃದ್ಧೆಯನ್ನು ಕೊಲೆ ಮಾಡಿದ್ದ ಆರೋಪಿಯ ಬಂಧನ

ಸಾಂದರ್ಭಿಕ ಚಿತ್ರ | PC : Image by macrovector on Magnific
ಬೆಂಗಳೂರು : ಕೌಟುಂಬಿಕ ಸಮಸ್ಯೆಗಳಿಂದಾಗಿ ಮನೆಯನ್ನು ಬಿಟ್ಟು ಕೆಂಗೇರಿ ಸಮೀಪದ ಕೋಣಸಂದ್ರದ ವೃಷಭಾವತಿನಗರ ಲೇಔಟ್ನ ದೇವಸ್ಥಾನದ ಮುಂಭಾಗದಲ್ಲಿ ಮಲಗಿದ್ದ 65 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರವೆಸಗಿ, ನಂತರ ಆಕೆಯನ್ನು ಕೊಲೆ ಮಾಡಿದ ಆರೋಪದಡಿ 20 ವರ್ಷದ ಆರೋಪಿಯನ್ನು ಕೆಂಗೇರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಗಿರಿನಗರ ಮತ್ತು ಕಾಟನ್ಪೇಟೆ ಪೊಲೀಸ್ ಠಾಣೆಗಳಲ್ಲಿ ಎನ್ಡಿಪಿಎಸ್ ಹಾಗೂ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸಾತ್ವಿಕ್ ಎಂದು ಗುರುತಿಸಲಾಗಿದೆ. ನಾರಾಯಣಮ್ಮ ಮೃತಪಟ್ಟ ವೃದ್ಧೆ ಎಂದು ತಿಳಿದು ಬಂದಿದೆ.
ನಾರಾಯಣಮ್ಮ ಸುಮಾರು ದಿನಗಳಿಂದ ರಾತ್ರಿ ವೇಳೆಯಲ್ಲಿ ದೇವಸ್ಥಾನದ ಮುಂಭಾಗವೇ ಮಲಗುತ್ತಿದ್ದರು. ಆದರೆ ನ.3ರಂದು ಆಕೆಯು ಮೃತಪಟ್ಟಿರುವುದನ್ನು ಸ್ಥಳೀಯರೊಬ್ಬರು ಗಮನಿಸಿ, ವೃದ್ಧೆಯ ಮಗನಿಗೆ ಮಾಹಿತಿಯನ್ನು ನೀಡಿದ್ದಾರೆ. ಸ್ಥಳಕ್ಕೆ ಬಂದ ಮಗನು, ತಾಯಿಯನ್ನು ಗಮನಿಸಿ ನಂತರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್. ಪ್ರಕರಣ ದಾಖಲಿಸಲಾಗಿತ್ತು.
ನ.5ರಂದು ಮೃತಪಟ್ಟ ನಾರಾಯಣಮ್ಮರವರ ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ. ಹಾಗೆಯೇ ತನಿಖಾ ಹಂತದಲ್ಲಿ ದೂರುದಾರರಿಂದ ಮಾಹಿತಿಯನ್ನು ಕಲೆಹಾಕಿ ಮೃತೆಯನ್ನು ಯಾರೋ ಕೊಲೆ ಮಾಡಿ, ಆಕೆಯ ಬಳಿಯಿದ್ದ ಹಣ ಮತ್ತು ಮೈಮೇಲಿದ್ದ ಒಡವೆಗಳನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ಕೈಗೊಂಡು, ವೃಷಭಾವತಿನಗರ ಲೇಔಟ್ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಓರ್ವ ವ್ಯಕ್ತಿಯನ್ನು ನ.6ರಂದು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಲಾಯಿತು. ಆತ ಈ ಪ್ರಕರಣದಲ್ಲಿ ವೃದ್ದೆಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಶಕ್ಕೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿದ್ದು, ಆರೋಪಿಯು ತನ್ನ ದುಶ್ಚಟಗಳನ್ನು ಪೂರೈಸಿಕೊಳ್ಳಲು ಹಣವಿಲ್ಲದ ಕಾರಣ, ಒಂಟಿಯಾಗಿ ಮಲಗುತ್ತಿದ್ದ ಅಜ್ಜಿಯನ್ನು ಗಮನಿಸಿ ಆಕೆಯ ಬಳಿಯಿದ್ದ ಹಣ ಮತ್ತು ಮೈಮೇಲಿದ್ದ ಒಡವೆಗಳನ್ನು ಕಳವು ಮಾಡುವ ಉದ್ದೇಶದಿಂದ ನ.3ರಂದು ಬೆಳಗಿನ ಜಾವ ಅಜ್ಜಿ ಮಲಗಿದ್ದ ಸ್ಥಳಕ್ಕೆ ಹೋಗಿ, ಆಕೆಯ ಬಾಯಿಯನ್ನು ಮುಚ್ಚಿ, ಕೈಯಿಂದ ಹಲ್ಲೆ ಮಾಡಿ, ಆಕೆಯ ಬಳಿಯಿದ್ದ ಹಣ ಹಾಗೂ ಚಿನ್ನದ ಉಂಗುರವನ್ನು ಕಿತ್ತುಕೊಂಡು ಹೋಗಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಆರೋಪಿ ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಹೊಡೆತದ ರಭಸಕ್ಕೆ ಆಕೆಯ ಎದೆಯ ಮೂಳೆ ಮುರಿದು ಹೋಗಿತ್ತು. ಇಷ್ಟಾದರೂ ಆತ ವೃದ್ಧೆಯ ಮೇಲೆರಗಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಆರೋಪಿ ವಿರುದ್ದ ಈಗಾಗಲೇ ಒಂದು ಸರಗಳ್ಳತನ ಹಾಹೂ ಎನ್ಡಿಪಿಎಸ್ ಕೇಸ್ ಇದ್ದು, ಅತ್ಯಾಚಾರ ಸಂಬಂಧ ಅನ್ವಯಿಸುವ ಕಾಯ್ದೆಗಳನ್ನೂ ಸೇರಿಸಿ ತನಿಖೆ ಮುಂದುವರಿಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.






