Bengaluru | ಇಬ್ಬರು ವಿದೇಶಿಯರು ಸೇರಿ 34 ಮಂದಿ ಡ್ರಗ್ಸ್ ಫೆಡ್ಲರ್ಗಳ ಬಂಧನ; 12.61 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ

ಸಾಂದರ್ಭಿಕ ಚಿತ್ರ | PC : Image by macrovector on Magnific
ಬೆಂಗಳೂರು : ನಿಷೇಧಿತ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟದ ವಿರುದ್ಧ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು, ಇಬ್ಬರು ವಿದೇಶಿಯರು ಸೇರಿ 34 ಮಂದಿ ಡ್ರಗ್ಸ್ ಫೆಡ್ಲರ್ ಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 12.61 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಹೆಬ್ಬಾಳ, ಕೋರಮಂಗಲ, ಡಿ.ಜೆ.ಹಳ್ಳಿ, ಮಹಾಲಕ್ಷ್ಮೀಪುರಂ, ಆಡುಗೋಡಿ, ಯಶವಂತಪುರ, ಹೆಣ್ಣೂರು, ಗೋವಿಂದಪುರ, ಬೇಗೂರು, ಹೆಬ್ಬಗೋಡಿ ಹಾಗೂ ಬಂಡೇಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದಾಗಿ ವಿವಿಧ ದಿನಾಂಕಗಳಂದುಪೊಲೀಸರಿಗೆ ಮಾಹಿತಿ ಲಭಿಸಿತ್ತು.
ಈ ಮಾಹಿತಿಗಳನ್ನಾಧರಿಸಿ ಠಾಣೆಗಳಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿ ಸ್ಥಳಗಳ ಮೇಲೆ ದಾಳಿ ಮಾಡಿ ಇಬ್ಬರು ವಿದೇಶಿಯರು, 9 ಮಂದಿ ಹೊರರಾಜ್ಯದವರು ಹಾಗೂ 23 ಮಂದಿ ಸ್ಥಳೀಯರು ಸೇರಿದಂತೆ ಒಟ್ಟು 34 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. 5 ಕೆ.ಜಿ. 519 ಗ್ರಾಂ ಎಂಡಿಎಂಎ, 46 ಕೆ.ಜಿ. 486 ಗ್ರಾಂ ಗಾಂಜಾ, 72.82 ಗ್ರಾಂ ಕೊಕೇನ್ ಹಾಗೂ 1 ಲೀಟರ್ 542 ಮಿಲಿಲೀಟರ್ ಹ್ಯಾಶಿಶ್ ಆಯಿಲ್, 8 ಮೊಬೈಲ್ 2 ದ್ವಿಚಕ್ರ ವಾಹನಗಳು ಜಪ್ತಿ ಮಾಡಿದ್ದಾರೆ.
ಡಿಜೆ ಹಳ್ಳಿ ಠಾಣೆ ಪೊಲೀಸರು 1.66 ಕೋಟಿ ರೂ. ಮೌಲ್ಯದ 831 ಗ್ರಾಂ ಎಂಡಿಎಂಎ ಹಾಗೂ ಮಹಾಲಕ್ಷ್ಮೀಪುರಂ ಠಾಣೆ ಪೊಲೀಸರು 4 ಪ್ರಕರಣಗಳಲ್ಲಿ 1.24 ಕೋಟಿ ರೂ. ಮೌಲ್ಯದ 1 ಲೀ.40 ಮಿ.ಲೀ ಹ್ಯಾಶಿಶ್ ಆಯಿಲ್, 415 ಗ್ರಾಂ ಗಾಂಜಾ, 490 ಗ್ರಾಂ ಎಂಡಿಎಂಎ, 3 ಮೊಬೈಲ್ ಹಾಗೂ ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.
ಹೆಬ್ಬಾಳ ಠಾಣೆ ಪೊಲೀಸರು 3 ಪ್ರಕರಣಗಳಲ್ಲಿ 6.32 ಕೋಟಿ ರೂ. ಮೌಲ್ಯದ 3 ಕೆಜಿ 114 ಗ್ರಾಂ ಎಂಡಿಎಂಎ, 9 ಕೆಜಿ 321 ಗ್ರಾಂ ಗಾಂಜಾ ವಶಪಡಿಸಿಕೊಂಡರೆ, ಕೋರಮಂಗಲ ಠಾಣೆ ಪೊಲೀಸರು 1.68 ಕೋಟಿ ರೂ. ಮೌಲ್ಯದ 841 ಗ್ರಾಂ ಎಂಡಿಎಂಎ, ಒಂದು ಮೊಬೈಲ್ ಜಪ್ತಿ ಮಾಡಿದ್ದಾರೆ.
ಯಶವಂತಪುರ ಠಾಣೆ ಪೊಲೀಸರು 73 ಲಕ್ಷ ರೂ. ಮೌಲ್ಯದ 72.82 ಗ್ರಾಂ ಕೊಕೇನ್, 2 ಮೊಬೈಲ್ಗಳು, ಆಡುಗೋಡಿ ಪೊಲೀಸರು 27.20 ಲಕ್ಷ ರೂ. ಮೌಲ್ಯದ 136 ಗ್ರಾಂ ಎಂಡಿಎಂಎ, 2 ಮೊಬೈಲ್, ಒಂದು ಸಾವಿರ ರೂ. ನಗದು, ಹೆಣ್ಣೂರು ಪೊಲೀಸರು 21.40 ಲಕ್ಷ ಮೌಲ್ಯದ 107 ಎಂಡಿಎಂಎ, ದ್ವಿಚಕ್ರ ವಾಹನ, ಗೋವಿಂದಪುರ ಠಾಣೆ ಪೊಲೀಸರು 17 ಲಕ್ಷ ರೂ. ಮೌಲ್ಯದ 17 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬೇಗೂರು ಠಾಣೆ ಪೊಲೀಸರು 3 ಪ್ರಕರಣಗಳಲ್ಲಿ 13.74 ಲಕ್ಷ ರೂ. ಮೌಲ್ಯದ 13 ಕೆಜಿ 750 ಗ್ರಾಂ ಗಾಂಜಾ, ಹೆಬ್ಬಗೋಡಿ ಪೆÇಲೀಸರು 12.56 ಲಕ್ಷ ಮೌಲ್ಯದ 502 ಮಿ.ಲೀ. ಹ್ಯಾಶಿಶ್ ಆಯಿಲ್ ಮತ್ತು ಬಂಡೇಪಾಳ್ಯ ಠಾಣೆ ಪೊಲೀಸರು 6 ಲಕ್ಷ ಬೆಲೆಯ 6 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ.
ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ವಿದೇಶ, ಹೊರರಾಜ್ಯ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತು ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.






